ನವದೆಹಲಿ: ನಾಲ್ಕು ವರ್ಷದ ಬಿಡುವಿನ ಬಳಿಕ 'ಪಠಾಣ್' ಆಗಿ ಬೆಳ್ಳಿತೆರೆಗೆ ಬಂದ ಶಾರುಖ್ ಖಾನ್ ಮತ್ತೊಮ್ಮೆ ಬಾಲಿವುಡ್ ಕಿಂಗ್ ಖಾನ್ ಎಂದು ಸಾಬೀತು ಮಾಡಿದ್ದಾರೆ. ಶಾರುಖ್ ಮತ್ತು ದೀಪಿಕಾ ಅಭಿನಯದ 'ಪಠಾಣ್' ಬಿಡುಗಡೆಗೊಂಡು ಐದು ದಿನಗಳ ಬಳಿಕವೂ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದು, ಉತ್ತಮ ಗಳಿಕೆ ಮಾಡುತ್ತಿದೆ. 57ರ ಹರೆಯದಲ್ಲೂ ಶಾರುಖ್ ಖಾನ್ ಆಕ್ಷನ್ಗೆ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರ ಹೊಸ ದಾಖಲೆ ಸೃಷ್ಟಿಸಲಿದೆ. ಇನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, 'ಪಠಾಣ್' ಸಿನಿಮಾ ಹಿಂದಿಯಲ್ಲಿ ಭಾನುವಾರ 60 ರಿಂದ 62 ಕೋಟಿ ಗಳಿಕೆ ಮಾಡಿದ್ದು, ಈ ಸಂಬಂಧ ನಿರ್ಮಾಪಕರಾಗಲಿ, ಚಿತ್ರತಂಡವಾಗಲಿ ಅಧಿಕೃತ ಅಂಕಿ - ಅಂಶ ನೀಡಿಲ್ಲ.
ಭಾನುವಾರ ಒಂದೇ ದಿನವೇ 'ಪಠಾಣ್' ಸಿನಿಮಾ ಇಷ್ಟು ಮೊತ್ತದ ಗಳಿಕೆ ಮಾಡುವ ಮೂಲಕ ಐದನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ತಮ್ಮ ನಾಗಾಲೋಟ ಮುಂದುವರೆಸಿದೆ. ಈ ಲೆಕ್ಕಾಚಾರ ನಡೆಸಿದರೆ ಚಿತ್ರ ಬಿಡುಗಡೆಯಾದ ದಿನದಿಂದ ಸಿನಿಮಾ ನಿರೀಕ್ಷೆಗೂ ಮೀರಿದ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಮೊದಲು ಭಾರತದಲ್ಲಿ ಸಿನಿಮಾಗಳು ಬಿಡುಗಡೆಯಾದ ಐದೇ ದಿನದಲ್ಲಿ 250 ಕೋಟಿ ಸಂಪಾದನೆ ಮಾಡಿದಲ್ಲಿ ಪಠಾಣ್ ಮೊದಲ ಸ್ಥಾನದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. 'ಪಠಾಣ್' ಹೊಸ ಮೈಲಿಗಲ್ಲು, ಈ ಹಿಂದೆ 250 ಕೋಟಿ ಗಳಿಕೆ ಮಾಡಿದ್ದ 'ದಂಗಲ್', 'ಬಾಹುಬಲಿ 2' ಮತ್ತು 'ಕೆಜಿಎಫ್2' ದಾಖಲೆಯನ್ನು ಪಠಾಣ್ ಮೀರಿಸಲಿದೆ. ಈ ಹಿಂದೆ 'ಕೆಜಿಎಫ್ 2' ಹಿಂದಿ ಸಿನಿಮಾ ಏಳು ದಿನದಲ್ಲಿ 250 ಕೋಟಿ ಗಳಿಕೆ ಮಾಡಿದರೆ, 'ಬಾಹುಬಲಿ 2' ಹಿಂದಿ ಸಿನಿಮಾ 8ದಿನದಲ್ಲಿ, 'ದಂಗಲ್', 'ಸಂಜು' ಮತ್ತು 'ಟೈಗರ್ ಜಿಂದಾ ಹೇ' ಹಿಂದಿ ಸಿನಿಮಾ 10 ದಿನದಲ್ಲಿ 250 ಕೋಟಿ ಸಂಪಾದಿಸಿದ್ದವು ಎಂದಿದ್ದಾರೆ.