ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಕೇವಲ 12 ದಿನಗಳಲ್ಲಿ 832 ಕೋಟಿ ರೂಪಾಯಿ ಬಾಚಿಕೊಂಡಿದೆ. ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಈ ಮಟ್ಟದಲ್ಲಿ ಹಣ ಸಂಗ್ರಹಿಸಿರುವ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ. ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಸಿದ್ದಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾವು 12 ನೇ ದಿನದಂದು ಭಾರತದಲ್ಲಿ 28.50 ಕೋಟಿ ರೂಪಾಯಿ ಸಂಗ್ರಹಿಸಿದೆ. ಈವರೆಗೆ ಅಂದರೆ ಕಳೆದ 12 ದಿನಗಳಲ್ಲಿ ಭಾರತದಲ್ಲಿ 515 ಕೋಟಿ ರೂ. ಮತ್ತು ವಿದೇಶದಲ್ಲಿ 317.20 ಕೋಟಿ ರೂ. ಕಲೆಕ್ಷನ್ ಮಾಡಿದೆ.
ದಾಖಲೆ ಮುರಿದ ಶಾರುಖ್ ಸಿನಿಮಾ:ಪಠಾಣ್ ಸಿನಿಮಾ ಬಾಲಿವುಡ್ನಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಕೆಲವೇ ದಿನಗಳಲ್ಲಿ 832 ಕೋಟಿಯನ್ನು ಗಳಿಸಿ, ದಂಗಲ್ ಸಿನಿಮಾದ ದಾಖಲೆಯನ್ನು ಮುರಿದಿದೆ. ಅಮೀರ್ ಖಾನ್ ನಾಯಕನಾಗಿ ನಟಿಸಿರುವ ದಂಗಲ್ ಸಿನಿಮಾ ಹಿಂದಿಯಲ್ಲಿ 387 ಕೋಟಿ ರೂಪಾಯಿಯನ್ನು ಗಳಿಸಿತ್ತು. ಈ ದಾಖಲೆಯನ್ನು ಅತ್ಯಂತ ಯಶಸ್ವಿಯಾಗಿ ಪಠಾಣ್ ಹಿಂದಿಕ್ಕಿದೆ. ಇದು ಮಾತ್ರವಲ್ಲದೇ, ಈ ಚಿತ್ರವು ಇನ್ನೂ 21 ಸಿನಿಮಾದ ಬಾಕ್ಸ್ ಆಫೀಸ್ ದಾಖಲೆಗಳಲ್ಲಿ ಮೀರಿದೆ. ಅದರಲ್ಲಿ ಪ್ರಮುಖವಾಗಿ ಸಲ್ಮಾನ್ ಖಾನ್ರ ಏಕ್ ಥಾ ಟೈಗರ್(2012) ಮತ್ತು ಟೈಗರ್ ಜಿಂದಾ ಹೈ(2017), ಹೃತಿಕ್ ರೋಷನ್ರ ವಾರ್(2019) ಯಶಸ್ಸನ್ನು ಪುಡಿ ಮಾಡಿದೆ.
'ಪಠಾಣ್' ಯಶಸ್ಸು:ಸಿದ್ದಾರ್ಥ್ ಆನಂದ್ ನಿರ್ದೇಶನದ ಪಠಾಣ್ ಜನವರಿ 25ರಂದು ಬಿಡುಗಡೆಯಾಗಿದೆ. ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸೇರಿದಂತೆ ಪ್ರಮುಖರು ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಆ್ಯಕ್ಷನ್ ಪಾತ್ರದಲ್ಲಿ ಕಿಂಗ್ ಶಾರುಖ್ ಮಿಂಚಿದ್ದು, ಸಿನಿಮಾಕ್ಕಾಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿ ಧೂಳೆಬ್ಬಿಸಿದ್ದ ಸ್ಯಾಂಡಲ್ವುಡ್ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ದಾಖಲೆಯನ್ನು ಪಠಾಣ್ ಬ್ರೇಕ್ ಮಾಡಿದೆ.