ಕಲಬುರಗಿ: ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಪಠಾಣ್ ಸಿನಿಮಾ ಇಂದು ದೇಶ ಅಲ್ಲದೇ ವಿದೇಶಗಳಲ್ಲೂ ಬಿಡುಗಡೆ ಅಗಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ಪ್ರದರ್ಶನಕ್ಕೆ ಕಲಬುರಗಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹಿಂದೂ ಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ಆಕ್ಷೇಪಿಸಿ ಪ್ರತಿಭಟನೆ ನಡೆಸಿದ್ದಾರೆ. ಕಲಬುರಗಿಯ ಥಿಯೇಟರ್ ಗೇಟ್ ಜಿಗಿದು ಒಳಪ್ರವೇಶಕ್ಕೆ ಯತ್ನಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಿದಾಗ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಎಲ್ಲ ಹಿಂದೂಪರ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಪ್ರತಿಭಟನಾಕಾರರನ್ನು ಸ್ಥಳಾಂತರಿಸಿ ಗೊಂದಲದ ವಾತಾವರಣ ತಿಳಿಗೊಳಿಸಿದ್ದಾರೆ.
ಹಿಂದೂ ಜಾಗೃತಿ ಸೇನೆ ಪ್ರತಿಭಟನೆ: ಈ ಪಠಾಣ್ ಚಿತ್ರವನ್ನು ಸನಾತನ ಹಿಂದೂ ಧರ್ಮದ ಕೇಸರಿ ಬಣ್ಣವನ್ನು ಅಶ್ಲೀಲವಾಗಿ ತೋರಿಸಲಾಗಿದೆ. 'ಬೇಶರಂ ರಂಗ್' ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅಪಮಾನ ಮಾಡಲಾಗಿದೆ ಎಂದು ದೇಶದ ಬಹುತೇಕ ಪ್ರದೇಶಗಳಲ್ಲಿ ವಿವಾದ ಹೊತ್ತಿಕೊಂಡಿದೆ. ಹಿಂದೂಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ವಿವಾದದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ದೇಶದಾದ್ಯಂತ ಚಿತ್ರ ಪ್ರದರ್ಶನ ಆಗುತ್ತಿದೆ. ಕಲಬುರಗಿಯ ಶೆಟ್ಟಿ ಸಿನಿಮಾ ಥಿಯೇಟರ್ ಬಳಿ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನೆಲೆ ಚಿತ್ರಮಂದಿರದ ಗೇಟ್ ಮುಚ್ಚಲಾಗಿತ್ತು.
ಥಿಯೇಟರ್ ಮೇಲೆ ಕಲ್ಲು ತೂರಾಟ: ಪಠಾಣ್ ಚಿತ್ರದ ನಿರ್ಮಾಪಕ, ನಟ ಶಾರುಖ್ ಖಾನ್, ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಕಾರ್ಯಕರ್ತರು ಏಕಾಏಕಿ ಚಿತ್ರಮಂದಿರದ ಗೇಟ್ ಜಿಗಿದು ಒಳಪ್ರವೇಶಕ್ಕೆ ಯತ್ನಿಸಿದರು. ಹಿಂದೂ ಜಾಗೃತಿ ಸೇನೆಯ ಮುಖಂಡ ಲಕ್ಷ್ಮಿಕಾಂತ ಸ್ವಾಧಿ ಅವರಿಗೆ ಈ ವೇಳೆ ಗೇಟ್ (ಹರಿತವಾದ ಕಬ್ಬಿಣ) ತಗುಲಿ ಕೈಯಿಂದ ರಕ್ತ ಸುರಿಯಲು ಆರಂಭಿಸಿದರೂ ಪಟ್ಟು ಬಿಡದೇ ಚಿತ್ರ ಪ್ರದರ್ಶನ ತಡೆಯಲು ಕಾರ್ಯಕರ್ತರು ಯತ್ನಿಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿದಾಗ ರೊಚ್ಚಿಗೆದ್ದ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದರು. ತಕ್ಷಣ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಬೇರಡೆ ಸ್ಥಳಾಂತರ ಮಾಡಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾ ಇಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಎಲ್ಲೆಡೆ ತೆರೆ ಕಂಡಿದೆ. ಚಿತ್ರದ ʼಬೇಶರಂ ರಂಗ್ʼ ಹಾಡಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಹಿಂದೂ ಧರ್ಮದ ಕೇಸರಿ ಬಣ್ಣವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂಬ ಆರೋಪವಿದೆ. ಕೇಸರಿ ಬಣ್ಣಕ್ಕೆ ಅಪಮಾನ ಮಾಡಿದ ಈ ಚಿತ್ರವನ್ನು ಪ್ರದರ್ಶನ ಮಾಡದಂತೆ ಹಿಂದೂಪರ ಸಂಘಟಕರು ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಆ್ಯಕ್ಷನ್ ಅವತಾರದಲ್ಲಿ ಕಿಂಗ್ ಖಾನ್.. ಅಭಿಮಾನಿಗಳು ಏನಂದ್ರು ಗೊತ್ತಾ?