ಪರ್ವೀನ್ ಬಾಬಿ ಬಾಲಿವುಡ್ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿಯರಲ್ಲಿ ಒಬ್ಬರಾಗಿದ್ದರು. ಇವರು ಇಹಲೋಕ ತ್ಯಜಿಸಿ 18 ವರ್ಷಗಳಾಗಿದ್ದರೂ ಅವರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈಗಲೂ ಅವರ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಟ್ಟು ವೀಕ್ಷಿಸುವುದುಂಟು. ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದ ಪರ್ವೀನ್ ಬಾಬಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಹೋಗಿದ್ದಾರೆ.
ಸೂಪರ್ ಹಿಟ್ ಚಿತ್ರಗಳ ನಾಯಕಿ:ತಮ್ಮ ನಟನೆ ಮತ್ತು ಸೌಂದರ್ಯದಿಂದ ಖ್ಯಾತಿ ಗಳಿಸಿದ್ದ ಪರ್ವೀನ್ ಬಾಬಿ ಅಮರ್ ಅಕ್ಬರ್ ಆಂಥೋನಿ, ದೀವಾರ್, ನಮಕ್, ಹಲಾಲ್, ಶಾನ್ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಪರ್ವೀನ್ ಬಾಬಿ ಜೋಡಿ ಸಿನಿಪ್ರಿಯರನ್ನು ಮೋಡಿ ಮಾಡಿತ್ತು.
2005ರಲ್ಲಿ ಇಹಲೋಕ ತ್ಯಜಿಸಿದ್ದ ನಟಿ ಪರ್ವೀನ್ ಬಾಬಿ:ನಟಿ ಪರ್ವೀನ್ ಬಾಬಿ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದ 1983ರ ಸಂದರ್ಭದಲ್ಲಿ ಅವರು ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದರು. ಬಳಿಕ ವಿಶ್ವಪ್ರವಾಸಕ್ಕೆ ಹೊರಟರು. ಆ ಸಂದರ್ಭ ಅವರ ಮಾನಸಿಕ ಸ್ಥಿತಿಗತಿ ಸ್ವಲ್ಪ ಹದಗೆಟ್ಟಿದೆ ಎಂಬ ಚರ್ಚೆಗಳು ಕೂಡ ನಡೆದಿದ್ದವು. 1990ರ ವೇಳೆ ಏಕಾಂಗಿಯಾಗಿದ್ದರು ಮತ್ತು 2005ರಲ್ಲಿ ಇಹಲೋಕ ತ್ಯಜಿಸಿದರು.
ಅನುಮಾನಾಸ್ಪದ ಸಾವು: 2005ರ ಜನವರಿ 20ರಂದು ಪರ್ವೀನ್ ಬಾಬಿ ನಿಧನದ ಸುದ್ದಿ ಬೆಳಕಿಗೆ ಬಂತು. ಅವರು ಮೃತಪಟ್ಟು ಮೂರು ದಿನಗಳಾದ ಬಳಿಕ ಸುದ್ದಿ ತಿಳಿಯಿತು ಎನ್ನಲಾಗಿದೆ. ಮೂರು ದಿನಗಳಿಂದ ಅವರ ಮನೆಯಿಂದ ಯಾರೂ ಹೊರಗೆ ಬಂದಿರಲಿಲ್ಲ. ಬಾಗಿಲಿನ ಹೊರಗೆ ದಿನ ಪತ್ರಿಕೆ ಮತ್ತು ಹಾಲಿನ ಪೊಟ್ಟಣಗಳು ರಾಶಿ ಬಿದ್ದಿದ್ದವು. ಬಾಗಿಲಿಗೆ ಕೀ ಕೂಡ ಹಾಕಿರಲಿಲ್ಲ. ನೆರೆಹೊರೆಯವರು ಇದನ್ನು ಗಮನಿಸಿದ್ದಾರೆ. ಅವರ ಅಪಾರ್ಟ್ಮೆಂಟ್ನ ಕದ ತೆರೆಯಲು ಹೋದಾಗ ವಾಸನೆ ಬಂದಿದ್ದು, ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.