ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ರಾಜಸ್ಥಾನದ ಉದಯಪುರದಲ್ಲಿ ಆಪ್ ನಾಯಕ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿಯ ಮದುವೆ ಸಂಭ್ರಮ ಮನೆ ಮಾಡಿದೆ. ಇಂದು ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಾಳೆ ವಿವಾಹ ಸಂಪನ್ನಗೊಳ್ಳಲಿದೆ. ಸಂಗೀತ ಸಮಾರಂಭದ ಸಿದ್ಧತೆ ಪೂರ್ಣಗೊಂಡಿದೆ.
ನಿನ್ನೆ ಬೆಳಿಗ್ಗೆ ವಧು ವರರು ಉದಯಪುರಕ್ಕೆ ತಲುಪಿದರು. ಅದಾದ ಬಳಿಕ ಜೋಡಿಯ ಪೋಷಕರು ಆಗಮಿಸಿದರು. ನಂತರ ಕುಟುಂಬಸ್ಥರು, ಆಪ್ತರು ಆಗಮಿಸಿದ್ದಾರೆ. ಇಂದು ಕೂಡ ಹಲವರು ಆಗಮಿಸಿದ್ದು, ವಿಡಿಯೋಗಳು ವೈರಲ್ ಆಗುತ್ತಿವೆ. ಪಾಪರಾಜಿಗಳು ಏರ್ಪೋರ್ಟ್ ಬಳಿಯೇ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವವರ ಫೋಟೋ, ವಿಡಿಯೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದಾರೆ. ಅವುಗಳು ಸೋಷಿಯಲ್ ಮೀಡಿಯಾ ಸುತ್ತುವರಿಯುತ್ತಿದ್ದು, ಮದುವೆ ಕುರಿತ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಅತಿಥಿಗಳು ಆಗಮಿಸುತ್ತಿದ್ದಾರೆ. ಪರಿಣಿತಿ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಆಂಟಿ ಈಗಾಗಲೇ ಉದಯಪುರಕ್ಕೆ ತಲುಪಿದ್ದಾರೆ. ಕಾಮಿನಿ ಚೋಪ್ರಾ ಪತಿಯೊಂದಿಗೆ ಮದುವೆಗೆ ಆಗಮಿಸಿದ್ದಾರೆ. ಇತ್ತ ರಾಜ್ಯಸಭಾ ಸಂಸದ ಡೆರೆಕ್ ಓಬ್ರಿಯೆನ್, ಉದ್ಯಮಿ ಅಶೋಕ್ ಮಿತ್ತಲ್, ರಾಜ್ಯಸಭಾ ಸಂಸದ ವಿಕ್ರಮ್ಜಿತ್ ಸಿಂಗ್ ಸಹ್ನಿ ಕೂಡ ಆಗಮಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಣ್ಯರು, ನವಜೋಡಿಗಳು ನೂರ್ಕಾಲ ಖುಷಿಯಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಮಧ್ಯಾಹ್ನದ ಅದ್ಧೂರಿ ಭೋಜನ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ಸಂಜೆ 7 ಗಂಟೆಗೆ ಸಂಗೀತ ಸಮಾರಂಭ ನಡೆಯಲಿದೆ. 90ರ ಸೂಪರ್ ಹಿಟ್ ಹಾಡುಗಳು ಸಮಾರಂಭದ ಮೆರುಗು ಹೆಚ್ಚಿಸಲಿದೆ. ಮದುವೆಯ ಶಾಸ್ತ್ರ, ಈವೆಂಟ್ಗಳು ಹೋಟೆಲ್ ಲೀಲಾ ಪ್ಯಾಲೆಸ್, ತಾಜ್ ಲೇಕ್ ಪ್ಯಾಲೆಸ್ನಲ್ಲಿ ನಡೆಯುತ್ತಿದೆ.