ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ, ಸಂಸದ ರಾಘವ್ ಚಡ್ಡಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಕೇಳಿಬರುತ್ತಿದೆ. ಈ ಜೋಡಿಯ ಕುಟುಂಬಸ್ಥರು ಸಂಪರ್ಕದಲ್ಲಿದ್ದು, ಮದುವೆ ಚರ್ಚೆಗಳನ್ನು ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ಸದ್ಯ ಡೇಟಿಂಗ್ ರೂಮರ್ಸ್ ಜೋರಾಗಿಯೇ ಹರಡುತ್ತಿದ್ದು, ಇದೀಗ ಪರಿಣಿತಿ ನಡೆ ಈ ಎಲ್ಲಾ ಗಾಸಿಪ್ಗಳು ನಿಜ ಎನ್ನುವಂತೆ ಮಾಡಿದೆ.
ಹೌದು. ಹೋಟೆಲ್ ಎದುರು ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ನಂತರ ಇವರ ಡೇಟಿಂಗ್ ವದಂತಿ ಜೋರಾಗಿಯೇ ಹರಡಲು ಪ್ರಾರಂಭಿಸಿದೆ. ಕೆಲ ದಿನಗಳ ಹಿಂದೆ ಈ ಜೋಡಿ ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಫೋಟೋಗಳು ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ರಾಘವ್ ಮತ್ತು ಪರಿಣಿತಿ ಮಾತ್ರ ಮೌನ ವಹಿಸಿದ್ದಾರೆ. ಇನ್ನೊಂದೆಡೆ ಈ ಜೋಡಿಯ ಕುಟುಂಬಸ್ಥರು ಸಂಪರ್ಕದಲ್ಲಿದ್ದು, ಮದುವೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.
ಇದೀಗ ಈ ಎಲ್ಲಾ ಗಾಸಿಪ್ಗಳು ನಿಜ ಎನ್ನುವಂತೆ ನಟಿ ಪರಿಣಿತಿ ಮುಂಬೈನಲ್ಲಿರುವ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಮದುವೆ ಉಡುಪಿನ ಬಗ್ಗೆ ಚರ್ಚಿಸಲು ತೆರಳಿದ್ದಾರೆ ಎಂಬ ಸಂಶಯ ಮೂಡುತ್ತಿದ್ದು, ಇದು ಎಲ್ಲಾ ಊಹಾಪೋಹಗಳಿಗೆ ತುಪ್ಪ ಸುರಿದಂತಿದೆ. ನಟಿಯು ಕಪ್ಪು ಬಣ್ಣದ ಮಿಡಿ ಉಡುಪನ್ನು ಧರಿಸಿ ಮನೀಶ್ ಮನೆಯ ಒಳಗೆ ಪ್ರವೇಶಿಸುವ ಮೊದಲು ಪಾಪರಾಜಿಗಳ ಕ್ಯಾಮರಾಗೆ ನಗುಮುಖದಿಂದಲೇ ಪೋಸ್ ನೀಡಿದರು.
ಇದನ್ನೂ ಓದಿ:ಬಾಲಿವುಡ್ ಲೈಫ್ ಅವಾರ್ಡ್ಸ್: 'ಕಾಂತಾರ' ಅತ್ಯುತ್ತಮ ಚಿತ್ರ, ರಿಷಬ್ ಶೆಟ್ಟಿ ಅತ್ಯುತ್ತಮ ನಟ