ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಈ ಜೋಡಿ ಡೇಟಿಂಗ್ನಲ್ಲಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗಳಿವೆ. ಈ ರೂಮರ್ ನಡುವೆ ಲವ್ ಬರ್ಡ್ಸ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಹಾಗಾಗಿ ಸಾರ್ವಜನಿಕವಾಗಿ ನಟಿ ಕಾಣಿಸಿಕೊಂಡಾಗಲೆಲ್ಲಾ, ಪಾಪರಾಜಿಗಳು ರಾಜಕಾರಣಿಯೊಂದಿಗಿನ ಅವರ ವಿವಾಹದ ವಿಷಯವನ್ನು ಕೇಳದೇ ಇರಲಾರರು.
ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಚೆಲುವೆ ಪರಿಣಿತಿ ಚೋಪ್ರಾ ಬ್ಲ್ಯಾಕ್ ಕೂಲ್ ಲುಕ್ನಲ್ಲಿ ಕಾಣಿಸಿಕೊಂಡರು. ಅವರ ಬಳಿ ಪಾಪರಾಜಿಗಳು ಮದುವೆಯ ಬಗ್ಗೆ ವಿಚಾರಿಸುತ್ತಲೇ ಇದ್ದರು. ನಟಿ ಮುಂದೆ ಸಾಗುತ್ತಿದ್ದಂತೆ ಇದೇ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಮದುವೆ ವಿಚಾರಕ್ಕೆ ಪ್ರತಿಕ್ರಿಯೆ ಕೊಡಲಿಲ್ಲ. ಆದ್ರೆ ನಾಚಿ ನೀರಾಗುವುದನ್ನು ತಡೆದುಕೊಳ್ಳಲು ನಟಿಗೆ ಸಾಧ್ಯವಾಗಲಿಲ್ಲ. ಮದುವೆ ದಿನಾಂಕದ ಪ್ರಶ್ನೆಗೆ ಕೆನ್ನೆ ಕೆಂಪು ಮಾಡಿಕೊಂಡು, ಮುಗುಳ್ನಗುತ್ತಾ ಮುಂದೆ ಸಾಗಿದರು.
ಪಾಪರಾಜಿಗಳು ತಮ್ಮನ್ನು ತಾವು 'ಲಡ್ಕಿವಾಲೆ' (ವಧುವಿನ ಕಡೆಯವರು) ಎಂದು ಕರೆದುಕೊಂಡರು. ನಿಮ್ಮ ಮತ್ತು ರಾಘವ್ ಮದುವೆಗೆ ಹೆಣ್ಣಿನ ಕಡೆಯವರಾಗಿ ಹಾಜರಾಗುವುದಾಗಿ ತಿಳಿಸಿದರು. ನಗು ತಡೆಯಲಾಗದೇ ಪರಿಣಿತಿ ಚೋಪ್ರಾ ಪ್ರತಿಕ್ರಿಯಿಸಿದರು. ನೀವು ಹುಚ್ಚರಾಗಿದ್ದೀರಿ ಎಂದು ತಿಳಿಸಿದರು. ಬಳಿಕ ಪರಿಣಿತಿ ಪಾಪರಾಜಿಗಳಿಗೆ ಪೋಸ್ ನೀಡುವುದನ್ನು ನಿಲ್ಲಿಸಿದರು, ಹೊರಡುವ ಮೊದಲು ಕ್ಯಾಮರಾ ಕಡೆ ನೋಡಿ ಮುಗುಳ್ನಕ್ಕರು.
ಪಾಪರಾಜಿಯೋರ್ವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ತಕ್ಷಣ, ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಕಾಮೆಂಟ್ ವಿಭಾಗಕ್ಕೆ ಸೇರಿದರು. ಓರ್ವರು ಬ್ಲಶಿಂಗ್ ಬ್ಲಶಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವರು ನಿಮ್ಮ ಮದುವೆ ಬಗ್ಗೆ ನಾವು ಉತ್ಸುಕರಾಗಿದ್ದೇವೆಂದು ತಿಳಿಸಿದ್ದಾರೆ.