ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಅವರ ಮದುವೆ ದಿನ ಸಮೀಪಿಸುತ್ತಿದೆ. ಶಾಸ್ತ್ರ, ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ. ಮದುವೆಯ ಪ್ರಮುಖ ಕಾರ್ಯಕ್ರಮಗಳು ಸೆಪ್ಟೆಂಬರ್ 23 ಮತ್ತು 24 ರಂದು ನಡೆಯಲಿದೆ. ಸೆ.24 ರಂದು ಉದಯಪುರದ ಅದ್ಧೂರಿ ವೇದಿಕೆಯಲ್ಲಿ ಇವರು ಪತಿ-ಪತ್ನಿಯರಾಗಲಿದ್ದಾರೆ. ಈ ಮೂಲಕ ಬಹುದಿನಗಳ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಹೀಗಾಗಿ, ಮತ್ತೊಂದು ಅದ್ಧೂರಿ ಮದುವೆಗೆ ಬಾಲಿವುಡ್ ಸಾಕ್ಷಿಯಾಗಲಿದ್ದು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ.
ಸೆಪ್ಟೆಂಬರ್ 24 ರಂದು ಹೋಟೆಲ್ ಲೀಲಾ ಪ್ಯಾಲೆಸ್ನಲ್ಲಿ ಇಬ್ಬರು ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಮದುವೆಯ ಎಲ್ಲಾ ಸಿದ್ಧತೆಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿವೆ. ಜನಪ್ರಿಯ ಜೋಡಿಯ ವಿವಾಹಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ನಟಿ ಮತ್ತು ಸಂಸದ ಯಾವಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾರೆಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದೀಗ ದೆಹಲಿಯಲ್ಲಿ ನಡೆದಿರುವ ಸೂಫಿ ನೈಟ್ (ಸಂಗೀತ ಕಾರ್ಯಕ್ರಮ) ಈವೆಂಟ್ನ ಫೋಟೋ, ವಿಡಿಯೋಗಳು ಹೊರಬಿದ್ದಿವೆ. ವಿಡಿಯೋಗಳಲ್ಲಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಅಥವಾ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿಲ್ಲ. ಆದ್ರೆ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಭಾಗಿಯಾಗಿದ್ದಾರೆ.