ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕುಟುಂಬಸ್ಥರು, ಆಪ್ತರು, ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಇಬ್ಬರು ಹಸೆಮಣೆ ಏರುವರು. ರಾಯಲ್ ವೆಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ದೇಶ, ವಿದೇಶಗಳಿಂದ ಈಗಾಗಲೇ ಅತಿಥಿಗಳು ಆಗಮಿಸಿದ್ದಾರೆ. ಈ ಪೈಕಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳೂ ಸಹ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ದೋಣಿಯೇರಲಿರುವ ವರ ರಾಘವ್: ಪಂಜಾಬಿ ಸಂಪ್ರದಾಯದ ವಿವಾಹದ ವಿಧಿ ವಿಧಾನಗಳು ಇಂದು ಬೆಳಗ್ಗೆಯಿಂದಲೇ ಪ್ರಾರಂಭವಾಗಿದೆ. ನಿನ್ನೆ ಸಂಗೀತ್ ಸೇರಿದಂತೆ ಮುದುವೆ ಮುನ್ನದ ಕಾರ್ಯಕ್ರಮಗಳು ನಡೆದಿವೆ. ಇಂದು ಮಧ್ಯಾಹ್ನ 1 ಗಂಟೆಗೆ ವರನಿಗೆ ಸಂಬಂಧಿಸಿದ ಶಾಸ್ತ್ರಗಳು ಜರುಗಲಿವೆ. ಮಧ್ಯಾಹ್ನ 2 ಗಂಟೆಗೆ ರಾಘವ್ ಮದುವೆಯ ಮೆರವಣಿಗೆಯೊಂದಿಗೆ ಹೊರಡುವರು. ಹೋಟೆಲ್ ತಾಜ್ ಲೇಕ್ ಪ್ಯಾಲೆಸ್‌ನಿಂದ ರಾಯಲ್ ಬೋಟ್ನಲ್ಲಿ ಹೋಟೆಲ್ ಲೀಲಾ ಪ್ಯಾಲೆಸ್ ತಲುಪಲಿದ್ದಾರೆ. ವಧುವಿನ ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಹಾರ ಬದಲಾಯಿಸಿಕೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಮದುವೆಯ ಮುಖ್ಯಶಾಸ್ತ್ರಗಳು ನೆರವೇರಲಿವೆ. ಸಂಜೆ 6.30ಕ್ಕೆ ಬೀಳ್ಕೊಡುಗೆ ಸಮಾರಂಭವಿದೆ. ರಾತ್ರಿ 8.30ಕ್ಕೆ ಆರತಕ್ಷತೆ ಏರ್ಪಡಿಸಲಾಗಿದೆ.
ವಧು-ವರರ ವಸ್ತ್ರವಿನ್ಯಾಸ ಹೇಗಿರಲಿದೆ?: ಪರಿಣಿತಿ ಚೋಪ್ರಾ ತಮ್ಮ ಮದುವೆಗಾಗಿ ಲೆಹೆಂಗಾವನ್ನು ಬಾಲಿವುಡ್ನ ಜನಪ್ರಿಯ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರಿಂದ ರೆಡಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಬ್ಲ್ಯೂ ಕಲರ್ ಲೆಹೆಂಗಾ ಧರಿಸಲಿದ್ದಾರೆ. ಲೆಹೆಂಗಾಗೆ ಹೊಂದಿಕೆಯಾಗುವ ಆಕರ್ಷಕ ಆಭರಣಗಳನ್ನೂ ಧರಿಸುವರು. ಮದುವೆ ಶಾಸ್ತ್ರದ ನಂತರ, ಪರಿಣಿತಿ ವಿಭಿನ್ನ ಶಾಸ್ತ್ರ, ಕಾರ್ಯಕ್ರಮಗಳಿಗಾಗಿ ಪರ್ಲ್ಸ್ ಥೀಮ್ ವೇಷಭೂಷಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪರಿಣಿತಿ ಮತ್ತು ರಾಘವ್ ಒಂದೇ ಬಣ್ಣದ ಉಡುಗೆಗಳನ್ನು ಧರಿಸಲಿದ್ದಾರೆ. ಇನ್ನುಳಿದ ಅಲಂಕಾರವೂ ಡ್ರೆಸ್ಗೆ ಮ್ಯಾಚ್ ಆಗುವಂತದ್ದೇ ಇರುತ್ತದೆ.
ಭದ್ರತಾ ವ್ಯವಸ್ಥೆ:ಉದಯಪುರದ 'ಹೋಟೆಲ್ ಲೀಲಾ ಪ್ಯಾಲೆಸ್' ಮತ್ತು ಹೋಟೆಲ್ 'ತಾಜ್ ಲೇಕ್ ಪ್ಯಾಲೆಸ್' ಅನ್ನು ಮದುವೆಗಾಗಿ ಬುಕ್ ಮಾಡಲಾಗಿದೆ. ಈ ಹೋಟೆಲ್ಗಳು ರಾಜಮನೆತನದ ಅನುಭವ ನೀಡಲಿವೆ. ಅದ್ಧೂರಿ ವಿವಾಹದ ಹಿನ್ನೆಲೆಯಲ್ಲಿ ಹೋಟೆಲ್ನ ಆಡಳಿತ ಮಂಡಳಿ ವಿಶೇಷ ಎಚ್ಚರಿಕೆ ವಹಿಸಿದೆ. ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಕೆಲಸಗಳನ್ನೂ ದೆಹಲಿ ಮೂಲದ ಕಂಪನಿಯೊಂದು ನೋಡಿಕೊಳ್ಳುತ್ತಿದೆ. ಹೋಟೆಲ್ ಸಿಬ್ಬಂದಿಯಿಂದಲೂ ಮದುವೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಸೋರಿಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.