ದೇಶದ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದೆ. ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೂರತ್ ಜಿಲ್ಲಾ ನ್ಯಾಯಾಲಯ ದೋಷಿ ಎಂದು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿದೆ. ಬಳಿಕ ಅವರಿಗೆ 30 ದಿನಗಳ ಜಾಮೀನು ಮಂಜೂರು ಮಾಡಲಾಗಿದೆ. ಶಿಕ್ಷೆ ಪ್ರಕಟವಾದ ಮರುದಿನವೇ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಈ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಆಮ್ ಆದ್ಮಿ ಪಕ್ಷದ ಯುವ ನಾಯಕ ಮತ್ತು ಪಂಜಾಬ್‌ನಿಂದ ಆಯ್ಕೆ ಆಗಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರೊಂದಿಗೆ ಡೇಟಿಂಗ್ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ಈ ಎರಡೂ ಸುದ್ದಿಗಳು ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ.
ಬಿಜೆಪಿ ಬೆಂಬಲಿಗ ಸಮೀತ್ ಠಕ್ಕರ್ ಅವರು ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಪಂಜಾಬಿ ಜೋಡಿಗೆ ರೋಕಾ (ಮದುವೆ ಮುನ್ನದ ಶಾಸ್ತ್ರ/ನಿಶ್ಚಿತಾರ್ಥ) ಶುಭಾಶಯಗಳು' ಎಂದು ಬರೆದಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನ ಹೊರಗೆ ರಾಘವ್ ಮತ್ತು ಪರಿಣಿತಿ ಕಾಣಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರೂ ಕೂಡ ಟ್ವಿಟರ್‌ನಲ್ಲಿ ತಮ್ಮನ್ನು ಫಾಲೋ ಮಾಡುತ್ತಾರೆ ಎಂದು ಸಮಿತ್ ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ. ಸಮಿತ್ ಬಿಜೆಪಿಯ ಕಟ್ಟಾ ಬೆಂಬಲಿಗ ಮತ್ತು ಅವರು ಟ್ವಿಟರ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವುದು ಇಲ್ಲಿ ಗಮನಿಸಬೇಕಾದ ವಿಚಾರ.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಇತ್ತೀಚೆಗಷ್ಟೇ ಮುಂಬೈನ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದಾರೆ. ಇದಕ್ಕೂ ಮೊದಲು ಸಹ ಹಲವು ಬಾರಿ ಹೋಟೆಲ್ಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.