ಹಿಂದಿ ಚಿತ್ರರಂಗದ ಅಭಿನೇತ್ರಿ ಪರಿಣಿತಿ ಚೋಪ್ರಾ ಅವರಿಗಿಂದು 35ನೇ ಬರ್ತ್ ಡೇ ಖುಷಿ. ಜನ್ಮದಿನದ ಸಂಭ್ರಮದಲ್ಲಿರುವ ಬಾಲಿವುಡ್ ನವವಧುವಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿಮಾ ಗಣ್ಯರೂ ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ. ಇತ್ತ, ಪ್ರೀತಿಯ ಪತಿ ಕೂಡ ಮುದ್ದಿನ ಪತ್ನಿಗೆ ಸ್ಪೆಷಲ್ ವಿಶ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದದಲ್ಲಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು. ಲಂಡನ್ ದಿನಗಳಿಂದಲೂ ನಟಿಗೆ ಪರಿಚಿತರಾಗಿರುವ ರಾಘವ್ ಚಡ್ಡಾ ಇಂದು ಡೇಟಿಂಗ್ ದಿನಗಳ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.
ರಾಘವ್ ಚಡ್ಡಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಿಣಿತಿ ಜತೆಗಿನ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವು ಡೇಟಿಂಗ್ ಟೈಮ್ನ ಲವೆಬಲ್ ಫೋಟೋಗಳಾಗಿವೆ. ''ಪಾರು, ನನ್ನ ಬದುಕನ್ನು ಬೆಳಗಿಸಿದಿರಿ. ನಿಮ್ಮ ಆ ಒಂದು ಸ್ಮೈಲ್ ನನ್ನ ಸವಾಲಿನ ಬದುಕನ್ನು ಸಹನೀಯವಾಗಿಸುತ್ತದೆ. ನನ್ನ ಪ್ರಪಂಚಕ್ಕೆ ಸಾಕಷ್ಟು ಖುಷಿ ತಂದಿದ್ದೀರಿ. ಈ ವಿಶೇಷ ದಿನ, ನಾನು ನಿಮ್ಮನ್ನೇ ಸೆಲೆಬ್ರೇಟ್ ಮಾಡಲು ಇಚ್ಛಿಸುತ್ತೇನೆ. ಮತ್ತಷ್ಟು ಪ್ರೀತಿ, ಖುಷಿ, ನೆನಪುಗಳನ್ನು ಜತೆಯಾಗಿ ಸೃಷ್ಟಿಸೋಣ. ಹ್ಯಾಪಿ ಬರ್ತ್ ಡೇ ವೈಫಿ'' ಎಂದು ಬರೆದುಕೊಂಡಿದ್ದಾರೆ. ರಾಘವ್ ಚಡ್ಡಾ ಅವರ ಹೃದಯಸ್ಪರ್ಶಿ ಬರಹಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆಕರ್ಷಣೀಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.