ಬಾಲಿವುಡ್ ಪ್ರೇಮಪಕ್ಷಿಗಳಾದ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಈ ಜೋಡಿ ಕುಟುಂಬಸ್ಥರು, ಆಪ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ವೇಳೆ ವಧು ಪರಿಣಿತಿ ಚೋಪ್ರಾ ತಿಳಿ ಬಣ್ಣದ ಲೆಹಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ರಾಘವ್ ಚಡ್ಡಾ ಶೆರ್ವಾನಿಯಲ್ಲಿ ಮಿಂಚುತ್ತಿದ್ದರು.
ಈ ವರ್ಷದ ಮೇ ತಿಂಗಳಲ್ಲಿ ರಾಘ್ನೀತಿ ದೆಹಲಿಯ ಕಪುರ್ತಲಾ ಹೌಸ್ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ಇಂದು (ಭಾನುವಾರ) ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಪಿಚೋಲಾ ಸರೋವರದ ನಡುವೆ ಇರುವ ಹೋಟೆಲ್ನಲ್ಲಿ ಪರಿಣಿತಿ ಮತ್ತು ರಾಘವ್ ಮದುವೆ ನಡೆದಿದೆ. ಮದುವೆಗೂ ಮುಂಚಿತವಾಗಿ ಶನಿವಾರ ರಾತ್ರಿ ಸಂಗೀತ ಕಾರ್ಯಕ್ರಮ ಕೂಡ ನಡೆದಿತ್ತು.
ಈ ವಿವಾಹ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ಗಳು, ಹೆಸರಾಂತ ರಾಜಕಾರಣಿಗಳು ಭಾಗವಹಿಸಿದ್ದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ರಾಘವ್ ಚಡ್ಡಾ ಅವರ ತಂದೆ ವೈಯಕ್ತಿಕವಾಗಿ ಸ್ವಾಗತಿಸಿದರು. ಪರಿಣಿತಿ ಚೋಪ್ರಾ ಆಪ್ತ ಸ್ನೇಹಿತೆ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಲಿವುಡ್ನ ಜನಪ್ರಿಯ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಭಾಗ್ಯಶ್ರೀ ಮತ್ತು ಇತರರು ಇಂದು ಬೆಳಗ್ಗೆಯೇ ಉದಯಪುರಕ್ಕೆ ಆಗಮಿಸಿದ್ದಾರೆ.
ರಾಘವ್ ಚಡ್ಡಾ ರಾಜಕಾರಣಿ ಆಗಿದ್ದರೆ, ಪರಿಣಿತಿ ಚೋಪ್ರಾ ನಟಿ. ಇವರಿಬ್ಬರ ವೃತ್ತಿ ಜೀವನವೇ ಬೇರೆ. ಮಾಡುವ ಕೆಲಸಗಳು ಕೂಡ ಬೇರೆಯೇ. ಇವರಿಬ್ಬರು ತಮ್ಮ ಕ್ಷೇತ್ರಗಳಲ್ಲಿ ಚಿರಪರಿಚಿತರು. ಪರಿಣಿತಿ ಚೋಪ್ರಾ ಸುಮಾರು ಒಂದು ದಶಕದಿಂದ ಹಿಂದಿ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ. ರಾಘವ್ ಚಡ್ಡಾ ಚಿಕ್ಕ ವಯಸ್ಸಿನಲ್ಲಿಯೇ ಸಂಸದನಾಗಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರಿಗೂ ಅಪಾರ ಅಭಿಮಾನಿಗಳಿದ್ದಾರೆ. ಇಂದು ಇವರ ಮದುವೆಗಾಗಿ ಸಾಕಷ್ಟು ಮಂದಿ ಕಾತುರರಾಗಿದ್ದರು.