ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್ ಮದುವೆಯ ನಂತರ, ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ ವಿಚಾರ ಟ್ರೆಂಡ್ ಆಗುತ್ತಿದೆ. ಶೀಘ್ರದಲ್ಲೇ ಹಿಂದಿ ಚಿತ್ರರಂಗ ಮತ್ತು ರಾಜಕೀಯ ಗಣ್ಯರ ಒಕ್ಕೂಟಕ್ಕೆ ಸಮಾರಂಭವೊಂದು ಸಾಕ್ಷಿಯಾಗಲಿದೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ.
ಮುಂಬೈನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ (ಆಮ್ ಆದ್ಮಿ ಪಾರ್ಟಿ) ಅವರ ವಿವಾಹ ಕುರಿತು ಅಂತೆ ಕಂತೆಗಳು ಹುಟ್ಟಿಕೊಂಡಿವೆ. ಆಮ್ ಆದ್ಮಿ ಪಕ್ಷದ ನಾಯಕರೋರ್ವರು ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿಗೆ ಶುಭ ಹಾರೈಸಿದ ನಂತರ ಪರಿಣಿತಿ ಮತ್ತು ರಾಘವ್ ಅವರ ವಿವಾಹದ ಸುತ್ತಲಿನ ಊಹಾಪೋಹಗಳು ತೀವ್ರಗೊಂಡಿವೆ. ಆದ್ರೆ ವದಂತಿಯ ಪ್ರೇಮ ಕ್ಷಿಗಳು ಇನ್ನೂ ಈ ಸುದ್ದಿಯನ್ನು ದೃಢೀಕರಿಸಿಲ್ಲ. ಸದ್ಯ ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ. ಇವೆಲ್ಲದರ ನಡುವೆ ರಾಘವ್ ಜೊತೆ ಮದುವೆಯ ಬಗ್ಗೆ ಪರಿಣಿತಿ ಅವರಿಂದ ಪ್ರತಿಕ್ರಿಯೆ ಪಡೆಯಲು ಪಾಪರಾಜಿಗಳು ಪ್ರಯತ್ನಿಸಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ರಾತ್ರಿ ಪರಿಣಿತಿ ಅವರು ಕತಾರ್ನ ದೋಹಾದಿಂದ ಮರಳಿದರು. ಚಿತ್ರವೊಂದರ ಶೂಟಿಂಗ್ ಮುಗಿಸಿ ಆಗಮಿಸಿದ ನಂತರ, ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಹಿಂದಿ ಚಿತ್ರನಟಿ ಬ್ಲ್ಯಾಕ್ ಡ್ರೆಸ್ನಲ್ಲಿ ಲೇಡಿ ಬಾಸ್ನಂತೆ ಕಾಣಿಸಿಕೊಂಡಿದ್ದಾರೆ. ಅವರ ಮದುವೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉತ್ಸುಕರಾದ ಪಾಪರಾಜಿಗಳು ಮತ್ತು ಅಭಿಮಾನಿಗಳು ನಟಿಯನ್ನು ಸುತ್ತುವರೆದರು. ಈ ಸಂದರ್ಭ ಪರಿಣಿತಿ ಚೋಪ್ರಾ ನಾಚಿ ನೀರಾದರು. ಬಳಿಕ ನಗುತ್ತಾ ಅವರಿಗೆ ಧನ್ಯವಾದ ಅರ್ಪಿಸಿದರು. ಆದ್ರೆ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ನಾಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರೌಂಡ್ ಹಾಕುತ್ತಿದ್ದು, ಮದುವೆ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ ಅಭಿಮಾನಿಗಳು. ನಟಿಯ ಮದುವೆ ವಿಚಾರ ನಿಜವಿರಬಹುದು ಎಂದು ಊಹಿಸುತ್ತಿದ್ದಾರೆ.