ಕನ್ನಡ ಚಿತ್ರರಂಗದಲ್ಲಿ ಟೈಟಲ್ನಿಂದಲೇ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ 'ಪರಿಮಳ ಡಿಸೋಜಾ'. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹಿರಿಯ ನಟಿ ಭವ್ಯ ಸಾಥ್ ನೀಡಿದ್ದಾರೆ. ಯುವ ಪ್ರತಿಭೆ ವಿನೋದ್ ಶೇಷಾದ್ರಿ ನಟಿಸಿ, ನಿರ್ಮಾಣ ಮಾಡಿರುವ 'ಪರಿಮಳ ಡಿಸೋಜಾ' ಚಿತ್ರದ ಟ್ರೈಲರ್ ಅನ್ನು ಅವರು ಬಿಡುಗಡೆಗೊಳಿಸಿದ್ದಾರೆ. ಜೊತೆಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಶುಭಹಾರೈಸಿದ್ದಾರೆ. ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮಾ. ಹರೀಶ್, ನಿರ್ಮಾಪಕ ಎಂ.ಎನ್ ಸುರೇಶ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ನಿರ್ದೇಶಕ ಡಾ. ಗಿರಿಧರ್ ಹೆಚ್ ಟಿ, "ಇದೊಂದು ಸಾಂಸಾರಿಕ ಕಥೆ ಒಳಗೊಂಡ ಸಿನಿಮಾ. ಹಿಂದೂ ಕುಟುಂಬದ ಮನೆಗೆ ಕ್ರಿಶ್ಚಿಯನ್ ಹುಡುಗಿ ಸೊಸೆಯಾಗಿ ಬರುತ್ತಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಒಂದು ಘಟನೆ ನಡೆಯುತ್ತದೆ. ಆ ಘಟನೆ ಏನು? ಅದರಿಂದ ಏನೆಲ್ಲಾ ಆಗುತ್ತದೆ ಎಂಬುದೇ ಈ ಚಿತ್ರದ ಕಥಾವಸ್ತು. ಇದರಲ್ಲಿ ಹೀರೋ ಅಂತ ಯಾರು ಇಲ್ಲ. ಕಥೆಯೇ ನಾಯಕ" ಎಂದು ತಿಳಿಸಿದರು.
ಬಳಿಕ ಚಿತ್ರದ ನಿರ್ಮಾಪಕ ಹಾಗೂ ನಟ ವಿನೋದ್ ಶೇಷಾದ್ರಿ ಮಾತನಾಡಿ, "ಈ ಚಿತ್ರ ನಿರ್ಮಾಣ ಮಾಡುವ ಜೊತೆಗೆ ಪೊಲೀಸ್ ಪಾತ್ರ ಕೂಡ ಮಾಡಿದ್ದೇನೆ. ಜೊತೆಗೆ ಚಿತ್ರದ ಒಂದು ಗೀತೆಗೆ ಸಾಹಿತ್ಯ ಕೂಡ ಬರೆದಿದ್ದೇನೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಆ್ಯಕ್ಷನ್, ಸೆಂಟಿಮೆಂಟ್, ಫ್ಯಾಮಿಲಿ ಮನರಂಜನೆ ಇರುವ ಕೌಟುಂಬಿಕ ಚಿತ್ರ. ಚಿತ್ರದಲ್ಲಿ ಒಟ್ಟು 107 ಕಲಾವಿದರು ನಟಿಸಿದ್ದಾರೆ" ಎಂದು ಹೇಳಿದರು.