ಕನ್ನಡ ಚಿತ್ರರಂಗದಲ್ಲಿ ಒಂದಾದ ಬಳಿಕ ಒಂದರಂತೆ ಸಿನಿಮಾಗಳು ಮೂಡಿ ಬರುತ್ತಿದೆ. ಸದ್ಯ ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ 'ಪರಿಮಳ ಡಿಸೋಜಾ'. ನಟಿ ಭವ್ಯ ಮುಖ್ಯಭೂಮಿಕೆಯಲ್ಲಿರುವ 'ಪರಿಮಳ ಡಿಸೋಜಾ' ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ಪ್ರೇಕ್ಷಕರಲ್ಲಿ ಸಿನಿಮಾ ಕುರಿತು ಕುತೂಹಲ ಮೂಡಿದೆ.
U/A ಪ್ರಮಾಣ ಪತ್ರ: ಡಾ. ಗಿರಿಧರ್ ಹೆಚ್ ಟಿ ಆ್ಯಕ್ಷನ್ ಕಟ್ ಹೇಳಿರುವ ಬಹು ತಾರಾಗಣದ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಬಹುನಿರೀಕ್ಷಿತ 'ಪರಿಮಳ ಡಿಸೋಜಾ' ಚಿತ್ರ ಇತ್ತೀಚೆಗೆ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿ U/A ಪ್ರಮಾಣ ಪತ್ರ ನೀಡಿದೆ.
ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ 'ಪರಿಮಳ ಡಿಸೋಜಾ': ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ ಆಗಿರುವ ಪರಿಮಳ ಡಿಸೋಜಾ ಚಿತ್ರದ ಟ್ರೇಲರ್ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತು ಲಕ್ಷಕ್ಕೂ ಅಧಿಕ ಜನರು ಈ ಟ್ರೇಲರ್ ವೀಕ್ಷಿಸಿ ಆನಂದಿಸಿದ್ದಾರೆ. ಚಿತ್ರದಲ್ಲಿ ಕೋಮಲ ಬನವಾಸೆ, ಭವ್ಯ ಅಲ್ಲದೇ ಶ್ರೀನಿವಾಸ್ ಪ್ರಭು, ವಿನೋದ್ ಶೇಷಾದ್ರಿ, ಶ್ವೇತ ರಮೇಶ್, ಪೂಜಾ ರಾಮಚಂದ್ರ, ನಾಗಮಂಗಲ ಜಯರಾಮ್, ಮೀಸೆ ಆಂಜನಪ್ಪ, ಜ್ಯೋತಿ ಮರೂರ್, ಉಗ್ರಂ ರೆಡ್ಡಿ, ಚಂದನ ಶ್ರೀನಿವಾಸ್, ಲಕ್ಷ್ಮಣ್ ಗೌಡ, ರೋಹಿಣಿ ಸೇರಿದಂತೆ ಮೊದಲಾದವರು ಅಭಿನಯಿಸಿದ್ದಾರೆ.