7 ವರ್ಷಗಳ ಹಿಂದೆ ಕನ್ನಡದಲ್ಲಿ ಬ್ಲಾಕ್ಬಸ್ಟರ್ ಹಿಟ್ ಪಡೆದು, ಇತರೆ ಭಾಷೆಗಳಿಗೂ ಡಬ್ ಆಗಿ ಮೆಚ್ಚುಗೆ ಪಡೆದ ಸಿನಿಮಾ 'ಕಿರಿಕ್ ಪಾರ್ಟಿ'. ಈ ಭರ್ಜರಿ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಆ ರೀತಿಯ ಯೂಥ್ ಕಾಮಿಡಿ ಸಿನಿಮಾ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ 'ಬ್ಯಾಚುಲರ್ ಪಾರ್ಟಿ'ಗೆ ಅಣಿಯಾಗಿದ್ದಾರೆ ಎಂಬುದು ವಿಶೇಷ.
ಕೆಲವು ದಿನಗಳ ಹಿಂದೆ 'ಬ್ಯಾಚುಲರ್ ಪಾರ್ಟಿ'ಯ ಮೊದಲ ಝಲಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಇದೀಗ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ. 2024ರ ಜನವರಿ 26 ಗಣರಾಜ್ಯೋತ್ಸವ ದಿನದಂದು ಫ್ಯಾನ್ಸ್ಗೆ ಪಾರ್ಟಿ ನೀಡಲು ತಂಡ ಮುಂದಾಗಿದೆ. ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಜನವರಿ 26 ಲಾಂಗ್ ವೀಕೆಂಡ್! ನಿಮ್ದೇನ್ ಪ್ಲಾನ್? ನೀವು ಯಾವುದೇ ಪ್ಲಾನ್ ಮಾಡಿಕೊಂಡಿಲ್ಲ ಅಂತಿದ್ರೆ, ನಿಮಗಾಗಿ ನಾವೇನಾದರೂ ಪ್ಲಾನ್ ಮಾಡಬಹುದೇ' ಎಂದು ಅಭಿಮಾನಿಗಳಲ್ಲಿ ಪ್ರಶ್ನಿಸಿದೆ.
ಇದಕ್ಕೆ ಕಮೆಂಟ್ ಬಾಕ್ಸ್ನಲ್ಲಿ ಉತ್ತರ ನೀಡಿರುವ ಫ್ಯಾನ್ಸ್, ಬ್ಯಾಚುಲರ್ ಪಾರ್ಟಿ ಅಂದೇ ರಿಲೀಸ್ ಮಾಡ್ತೀರಾ? ಅಥವಾ ಕಿರಿಕ್ ಪಾರ್ಟಿ ಸಿನಿಮಾವನ್ನು ಮತ್ತೊಮ್ಮೆ ಬಿಡುಗಡೆ ಮಾಡ್ತೀರಾ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಬ್ಯಾಚುಲರ್ ಪಾರ್ಟಿ ಟೀಸರ್ ಅಥವಾ ಟ್ರೇಲರ್ ಬಿಡುಗಡೆಯಾಗಬಹುದು ಎಂದು ತಮ್ಮ ಸಂದೇಹವನ್ನು ಹೊರಹಾಕಿದ್ದಾರೆ. ನೆಟ್ಟಿಗರೊಬ್ಬರು, ನೀವು ಪಾರ್ಟಿ ಕೊಡೋದಾದ್ರೆ ಎಲ್ಲಿಗೆ ಬೇಕಾದ್ರೂ ಬರ್ತೀವಿ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.