ಬಾಲಿವುಡ್ ಸ್ಟಾರ್ ಹೀರೋ ರಣ್ಬೀರ್ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಅನಿಮಲ್'. ಚಿತ್ರ ತಯಾರಕರಿಂದು ಚಿತ್ರದ ಮೂರನೇ ಹಾಡು 'ಪಾಪ ಮೇರಿ ಜಾನ್' ಅನ್ನು ಅನಾವರಣಗೊಳಿಸಿದ್ದಾರೆ. ಮಕ್ಕಳ ದಿನಾಚರಣೆಯಂದು ತಂದೆ ಮಗನ ಹಾಡು ಬಿಡುಗಡೆ ಆಗಿದೆ. ಅನಿಲ್ ಕಪೂರ್ ಹಾಗೂ ರಣ್ಬೀರ್ ಕಪೂರ್ ನಡುವಿನ ಸಂಬಂಧ ಈ ಚಿತ್ರದಲ್ಲಿ ಹೇಗಿರಲಿದೆ ಎಂಬುದರ ಒಂದು ಸಣ್ಣ ನೋಟವನ್ನು ಪಾಪ ಮೇರಿ ಜಾನ್ ಕೊಟ್ಟಿದೆ.
ನಟ ಅನಿಲ್ ಕಪೂರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಾಡಿನ ಫೋಸ್ಟರ್ ಹಂಚಿಕೊಂಡು, ಪಂಚ ಭಾಷೆಗಳಲ್ಲಿ ಮನಮುಟ್ಟುವ ಹಾಡು ಅನಾವರಣಗೊಂಡಿದೆ ಎಂದು ಬರೆದುಕೊಂಡಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿಯೂ ಇಂದು ಸಾಂಗ್ ರಿಲೀಸ್ ಆಗಿದೆ. ಪಾಪ ಮೇರಿ ಜಾನ್, ನಾನ್ನ ನೂವು ನಾ ಪ್ರಾಣಂ, ನೀ ಎನ್ ಉಲಗಮ್, ನನ್ನ ರವಿ ನೀನೆ, ನೀಯಾನಖಿಲಂ ಶೀರ್ಷಿಕೆಗಳಲ್ಲಿ ಹಾಡು ಬಿಡುಗಡೆ ಆಗಿದೆ. ಹಿಂದಿ ಆವೃತ್ತಿಯನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಸೋನು ಅವರ ಮಧುರ ದನಿ, ರಣ್ಬೀರ್ ಮತ್ತು ಅನಿಲ್ ಕಪೂರ್ ಅವರ ನಟನೆ ಈ ಚಿತ್ರದಲ್ಲಿನ ತಂದೆ ಮಗನ ನಡುವಿನ ಸೂಕ್ಷ್ಮ ವಿಚಾರಗಳನ್ನು ಅಚ್ಚುಕಟ್ಟಾಗಿ ಬಹಿರಂಗಪಡಿಸಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದ ಟೀಸರ್ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ತಂದೆ ಮಗನ ಸಂಬಂಧದಲ್ಲಿನ ಅಂತರವನ್ನು ಸೂಚಿಸಿತ್ತು. ಇದೀಗ ಬಿಡುಗಡೆಯಾಗಿರುವ ಈ ಹಾಡು ರಣ್ಬೀರ್ ಕಪೂರ್ - ಅನಿಲ್ ಕಪೂರ್ ರಿಲೇಶನ್ಶಿಪ್ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಹುವಾ ಮೈನ್ ಮತ್ತು ಸತ್ರಂಗ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಇಂದು ರಿಲೀಸ್ ಆಗಿರುವ 'ಪಾಪಾ ಮೇರಿ ಜಾನ್' ಪ್ರೇಕ್ಷಕರ ಮನ ಮುಟ್ಟುವಂತಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸುವುದರಲ್ಲಿ ಸಂದೇಹವೇ ಇಲ್ಲ.