ಹೊಂಬಾಳೆ ಫಿಲ್ಮ್ಸ್ನ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣದ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ಆ್ಯಕ್ಷನ್ ಕಟ್ ಹೇಳಿರುವ ಕಾಂತಾರ ಸಿನಿಮಾ 2022ರ ಸೂಪರ್ ಹಿಟ್ ಸಿನಿಮಾ ಆಗಿ ಹೊರ ಹೊಮ್ಮಿದೆ. ಕರಾವಳಿ ಸಂಸ್ಕ್ರತಿ, ಕಂಬಳ, ದೈವ ಆರಾಧನೆ ಜೊತೆಗೆ ಮಾನವ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕಥಾಹಂದರವನ್ನೊಳಗೊಂಡ ಕಾಂತಾರ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆ ಚಿತ್ರ ತಂಡದಿಂದ ದೈವಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ, ಹರಕೆ ತೀರಿಸಲಾಗಿದೆ.
ಪಂಜುರ್ಲಿ ಕೋಲ ಕೊಟ್ಟು ಹರಕೆ ಸಲ್ಲಿಕೆ: ಹೌದು, ಇತ್ತೀಚೆಗೆ ಕರಾವಳಿ ಭಾಗದಲ್ಲಿ ಕಾಂತಾರ ಚಿತ್ರ ತಂಡದ ವತಿಯಿಂದ ಪಂಜುರ್ಲಿ ಕೋಲ ಕೊಟ್ಟು ಹರಕೆ ತೀರಿಸಲಾಗಿದೆ. ಪಂಜುರ್ಲಿ ಕೋಲದ ಕ್ಷಣಗಳನ್ನು ಹೊಂಬಾಳೆ ಫಿಲ್ಮ್ಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಡಿಯೋಗೆ ವರಾಹ ರೂಪಂ ಹಾಡನ್ನು ಬಳಸಲಾಗಿದ್ದು, ವಿಡಿಯೋ ಬಹಳ ಅದ್ಭುತವಾಗಿ, ದೈವಿಕವಾಗಿ ಮೂಡಿಬಂದಿದೆ. ಈ ದೃಶ್ಯಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಪಂಜುರ್ಲಿ ಕೋಲದಲ್ಲಿ ರಿಷಬ್ ಶೆಟ್ಟಿ ಕುಟುಂಬ, ನಿರ್ಮಾಪಕ ವಿಜಯ್ ಕಿರಂಗದೂರ್, ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಂಡದ ಕೆಲವರು ಭಾಗಿಯಾಗಿದ್ದರು.
ಹೊಂಬಾಳೆ ಫಿಲ್ಮ್ಸ್ ಟ್ವೀಟ್:'' ಪ್ರಕೃತಿಗೆ ಶರಣಾಗಿ. ನಿಮ್ಮ ಜೀವನದಲ್ಲಿ ಸ್ವಾತಂತ್ರ್ಯ ಮತ್ತು ಯಶಸ್ಸನ್ನು ನಿಮಗೆ ನೀಡಿದ ಆ ಭಗವಂತನನ್ನು ಪ್ರಾರ್ಥಿಸಿ. ಕಾಂತಾರ ಚಿತ್ರ ತಂಡವು ದೈವವನ್ನು ವೀಕ್ಷಿಸಿತು ಜೊತೆಗೆ ದೈವದ ಆಶೀರ್ವಾದವನ್ನು ಪಡೆಯಿತು. ಹರಕೆ ತೀರಿಸಿದ ಕ್ಷಣಗಳು'' ಎಂದು ಹೊಂಬಾಳೆ ಫಿಲ್ಮ್ಸ್ ಮತ್ತು ನಟ ರಿಷಬ್ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.