ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ವಿಶ್ವಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನ ವಿರುದ್ಧದ ಹೇಳಿಕೆಗಳನ್ನು ಅವರ ಕಟ್ಟಾ ಅಭಿಮಾನಿಗಳು ಸಹಿಸುವುದಿಲ್ಲ. ಇದೀಗ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರನ್ನು ಟೀಕಿಸಿದ ಪಾಕಿಸ್ತಾನಿ ನಟಿಯನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ:ಪಾಕಿಸ್ತಾನಿ ನಟಿ ಮಹ್ರೂಮ್ ಬಲೋಚ್ (Mahroom Baloch) ಅವರು ಪಠಾಣ್ ನಟನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಟಿಯ ಹೇಳಿಕೆ ಬೆನ್ನಲ್ಲೇ ಅಭಿಮಾನಿಗಳು ನಟನ ಬೆಂಬಲಕ್ಕೆ ಬಂದಿದ್ದಾರೆ. ''ಶಾರುಖ್ ಖಾನ್ ಅವರಿಗೆ ನಟನೆ ತಿಳಿದಿಲ್ಲ ಮತ್ತು ನೋಡಲು ಸುಂದರವಾಗಿಲ್ಲ ಆದರೆ ಅವರು ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ'' ಎಂದು ಪಾಕಿಸ್ತಾನಿ ನಟಿ ತಿಳಿಸಿದ್ದಾರೆ. ಶಾರುಖ್ ಖಾನ್ ಅವರ ನಟನಾ ಸಾಮರ್ಥ್ಯದ ಬಗ್ಗೆ ಪಾಕಿಸ್ತಾನಿ ನಟಿ ಮಾಡಿದ್ದ ಕಾಮೆಂಟ್ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೊಳಗಾಗಿದ್ದಾರೆ.
ಅಭಿಮಾನಿಗಳ ಕಿಡಿ: ಅಧಿಕೃತ ಯೂಟ್ಯೂಬ್ ಚಾನೆಲ್ ಒಂದು ಪೋಸ್ಟ್ ಮಾಡಿರುವ ಸಂದರ್ಶನದ ಕುರಿತು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಇಡೀ ಜಗತ್ತಿಗೆ ಶಾರುಖ್ ಖಾನ್ ಯಾರೆಂದು ತಿಳಿದಿದೆ. ನನ್ನನ್ನು ಕ್ಷಮಿಸಿ, ನೀವು ಯಾರು?" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "3.8 ಬಿಲಿಯನ್ ಜನರು ಎಸ್ಆರ್ಕೆ ಅವರ ಶ್ರೇಷ್ಠತೆಯನ್ನು ಅರಿತಿದ್ದಾರೆ, ಅವರು ಕಿಂಗ್ ಖಾನ್" ಎಂದು ತಿಳಿಸಿದ್ದಾರೆ. ಮತ್ತೋರ್ವ ವ್ಯಕ್ತಿ ಪ್ರತಿಕ್ರಿಯಿಸಿ, "ದೇವರು ಜಗತ್ತಿನಲ್ಲಿ ಖ್ಯಾತಿ ಮತ್ತು ಗೌರವವನ್ನು ನೀಡಿದ ವ್ಯಕ್ತಿಯನ್ನು ಗೌರವಿಸಲು ಕಲಿಯಿರಿ. ಸೀಮಿತ ಕೆಲಸ ಮತ್ತು ಪ್ರತಿಭೆಗಿಂತ ಹೆಚ್ಚಾದ ಅಹಂಕಾರವನ್ನು ಹೊಂದಿರುವ ದುಃಖಭರಿತ ಕಲಾವಿದರು ನಮ್ರತೆ ಬಗ್ಗೆ ಕಲಿಯಬೇಕು" ಎಂದು ಹೇಳಿದ್ದಾರೆ.
'ಸಮರ್ಥ ನಟ ಅಲ್ಲ': ನಟ ಶಾರುಖ್ ಖಾನ್ ಆಕರ್ಷಕವಾಗಿಲ್ಲ, ಸಮರ್ಥ ನಟ ಅಲ್ಲ, ಅವರು ಸಾಂಪ್ರದಾಯಿಕ ಅರ್ಥದಲ್ಲಿ ಆಕರ್ಷಣೀಯವಾಗಿಲ್ಲ ಎಂದು ಪಾಕಿಸ್ತಾನಿ ನಟಿ ಮಹ್ರೂಮ್ ಬಲೋಚ್ ಭಾವಿಸಿದ್ದಾರೆ. ಟೀಕೆ ಮಾಡಿದ ನಂತರ ನಟನಿಗೆ "ದೊಡ್ಡ ಉದ್ಯಮಿ" ಎಂದು ಹೇಳಿದರು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಬಾಹ್ಯ ನೋಟದಿಂದ ನಿರ್ಧರಿಸಲಾಗುವುದಿಲ್ಲ ಎಂಬುದನ್ನು ಸಹ ನಟಿ ಚರ್ಚಿಸಿದರು. ಶಾರುಖ್ "ಓರ್ವ ದೊಡ್ಡ ಉದ್ಯಮಿ" ಮತ್ತು "ತನ್ನನ್ನು ತಾನು ಹೇಗೆ ಮಾರ್ಕೆಟ್ ಮಾಡಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ" ಎಂದು ಹೇಳಿದ ಅವರು "ಅವರಿಗೆ ನಟನೆ ತಿಳಿದಿಲ್ಲ" ಎಂದು ತಿಳಿಸಿದರು.