ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ 'ಪಠಾಣ್' ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಲಿವುಡ್ ಕಿಂಗ್ ಖಾನ್ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಜೊತೆ ಎಸ್ಆರ್ಕೆ ನಟನೆಯ ಈ ಚಿತ್ರ ಹಲವರ ಕೆಂಗಣ್ಣಿಗೆ ಗುರಿಯಾಗಿ ಬಿಡುಗಡೆ ಅದರೂ, ಚಿತ್ರ ಕಂಡ ಯಶಸ್ಸು ಮಾತ್ರ ಅಭೂತಪೂರ್ವ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 1,046ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡುವ ಮೂಲಕ ಗೆಲುವಿನ ನಗೆ ಬೀರಿದೆ. ಆದ್ರೀಗ ಪಾಕಿಸ್ತಾನಿ ನಟ ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆ ಕೊಟ್ಟಿದ್ದಾರೆ.
'ಪಠಾಣ್' ಪ್ರಪಂಚದಾದ್ಯಂತ ಸದ್ದು ಮಾಡಿದರೂ ಕೂಡ ಪಾಕಿಸ್ತಾನಿ ನಟ, ಯಾಸಿರ್ ಹುಸೈನ್ (Yasir Hussain) ಅವರು ಪ್ರಭಾವಿತರಾದಂತೆ ಕಾಣುತ್ತಿಲ್ಲ. ಚಿತ್ರ ಕಥೆಗಾರನೂ ಆಗಿರುವ ಪಾಕಿಸ್ತಾನಿ ನಟ, ಈ ಸಿನಿಮಾಗೆ ನಕಾರಾತ್ಮಕ ವಿಮರ್ಶೆಯನ್ನು ನೀಡಿದ್ದಾರೆ. ಸೂಪರ್ ಹಿಟ್ ಸಿನಿಮಾವನನ್ನು 'ಕಥೆಯಿಲ್ಲದ ಕಂಪ್ಯೂಟರ್ ಆಟ' / 'ಸ್ಟೋರಿಲೆಸ್ ವಿಡಿಯೋ ಗೇಮ್' ಎಂದು ಟೀಕಿಸಿದ್ದಾರೆ.
ಯಾಸಿರ್ ಹುಸೈನ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ 'ನೀವು ಮಿಷನ್ ಇಂಪಾಸಿಬಲ್ ಚಿತ್ರದ ಮೊದಲ ಭಾಗವನ್ನು ನೋಡಿದ್ದರೆ, ಶಾರುಖ್ ಖಾನ್ ಅವರ ಪಠಾಣ್ ಚಿತ್ರ 'ಸ್ಟೋರಿಲೆಸ್ ವಿಡಿಯೋ ಗೇಮ್'ನಂತೆ ಇದೆ ಎಂದು ನಿಮಗೆ ಅನಿಸುತ್ತದೆ, ಚಿತ್ರದಲ್ಲಿ ಹೆಚ್ಚೇನೂ ಇಲ್ಲ' ಎಂದು ಚಿತ್ರವನ್ನು ಟೀಕಿಸಿದ್ದಾರೆ.
ಚಿತ್ರದ ಬಗ್ಗೆ ಯಾಸಿರ್ ಕಾಮೆಂಟ್ ಮಾಡುತ್ತಿದ್ದಂತೆ, ಎಸ್ಆರ್ಕೆ ಅಭಿಮಾನಿಗಳು ಪಾಕ್ ನಟನನ್ನು ತರಾಟೆಗೆ ತೆಗೆದುಕೊಳ್ಳಲು ಶುರು ಹಚ್ಚಿಕೊಂಡಿದ್ದಾರೆ. ಶಾರುಖ್ ಖಾನ್ ಸಿನಿಮಾ ಟೀಕಿಸಲು ನೀವ್ಯಾರು?, ಹೌದು ನೀವು ಯಾರು, ನಿಮ್ಮ ಬಗ್ಗೆ ನಮಗೆ ತಿಳಿದಿಲ್ಲ, ಎಸ್ಆರ್ಕೆ ಎದುರು ನೀವೇನು ಅಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.