ಕರಾಚಿ: ಪಾಕಿಸ್ತಾನದ ಜಾಯ್‌ಲ್ಯಾಂಡ್ (Joyland) ಸಿನಿಮಾ ಇದೇ ನವೆಂವರ್ 18ರಂದು ಬಿಡುಗಡೆ ಆಗಲು ಸಜ್ಜಾಗಿತ್ತು. ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆ ಗಳಿಸಿದ್ದ ಈ ಚಿತ್ರ ಆಸ್ಕರ್ ಅವಾರ್ಡ್ಗೆ ಪಾಕಿಸ್ತಾನದಿಂದ ಅಧಿಕೃತವಾಗಿ ಆಯ್ಕೆ ಸಹ ಆಗಿತ್ತು. ಆದಾಗ್ಯೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಸಿನಿಮಾವನ್ನು ನಿಷೇಧಿಸಿ ಸಿನಿಪ್ರಿಯರಿಗೆ ಆಘಾತ ನೀಡಿತ್ತು. ಇದೀಗ ಈ ಸಿನಿಮಾ ಮೇಲಿನ ನಿಷೇಧದ ಬಗ್ಗೆ ಮರು ಪರಿಶೀಲಿಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಆದೇಶಿಸಿದ್ದಾರೆ.
ನವೆಂಬರ್ 18 ರಂದು ದೇಶಾದ್ಯಂತ ಬಿಡುಗಡೆ ಆಗಲು ಸಿದ್ಧವಾಗಿದ್ದ, ಉದಯೋನ್ಮಖ ನಟ ಸೈಮ್ ಸಾದಿಕ್ ಅವರೇ ಬರೆದು ನಿರ್ದೇಶಿಸಿದ ಜಾಯ್‌ಲ್ಯಾಂಡ್ ಸಿನಿಮಾವನ್ನು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬಿಡುಗಡೆ ದಿನಾಂಕಕ್ಕೂ ಒಂದು ವಾರ ಮುಂಚಿತವಾಗಿ ನಿಷೇಧಿಸಿತ್ತು.
ಯುವಕನೊಬ್ಬ ಮಂಗಳಮುಖಿಯೊಟ್ಟಿಗೆ ಪ್ರೀತಿಯಲ್ಲಿ ಬೀಳುವ ಕತೆಯನ್ನು 'ಜಾಯ್‌ಲ್ಯಾಂಡ್' ಸಿನಿಮಾ ಒಳಗೊಂಡಿದೆ. ಮಂಗಳಮುಖಿಯರ ಜೀವನ, ಸಮಾಜದಲ್ಲಿ ಅವರೆಡೆಗಿನ ತಿರಸ್ಕಾರ ಭಾವ, ಅವರ ಜೀವನ, ಅವರ ಭಾವನೆಗಳನ್ನು ಸಿನಿಮಾದಲ್ಲಿ ಅನಾವರಣ ಮಾಡಲಾಗಿದೆ. ಆದರೆ ಇದೇ ಕಾರಣಕ್ಕೆ ಪಾಕ್ ಸರ್ಕಾರ ಈ ಸಿನಿಮಾವನ್ನು ಬ್ಯಾನ್ ಮಾಡಿತ್ತು ಎನ್ನುವ ಮಾಹಿತಿ ಇದೆ.
ಚಲನಚಿತ್ರವನ್ನು ಮೌಲ್ಯಮಾಪನ ಮಾಡಲು ಮತ್ತು ನಿಷೇಧದ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಸೋಮವಾರ ತಡರಾತ್ರಿ ಪ್ರಧಾನಿ ಶೆಹಬಾಜ್ ಅವರ ಸಲಹೆಗಾರ ಸಲ್ಮಾನ್ ಸೂಫಿ ತಿಳಿಸಿದ್ದಾರೆ. ಸಮಿತಿಯು ದೂರುಗಳನ್ನು ಮತ್ತು ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲು ಕೆಲ ಅರ್ಹತೆಗಳನ್ನು ಪರಿಗಣಿಸುತ್ತದೆ ಎಂದು ಸೂಫಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಅರ್ಧ ಕೋಟಿ ವೆಚ್ಚದಲ್ಲಿ ತಯಾರಾದ ಯಟ್ಟ ಯಟ್ಟ ಸಾಂಗ್.. ಮೇಕಿಂಗ್ ವಿಡಿಯೋ ರಿಲೀಸ್
'ಜಾಯ್‌ಲ್ಯಾಂಡ್' ಸಿನಿಮಾದ ಕತೆ ಭಿನ್ನವಾಗಿದೆ. ಕುಟುಂಬವೊಂದು ಗಂಡು ಸಂತಾನಕ್ಕಾಗಿ ಕಾಯುತ್ತಿರುತ್ತದೆ. ಕೊನೆಗೆ ಆ ಕುಟುಂಬದಲ್ಲೊಂದು ಗಂಡು ಸಂತಾನ ಆಗುತ್ತದೆ. ಆತ ಬೆಳೆದು ಯುವನಾದಾಗ ಮಹಿಳೆಯೊಬ್ಬಳ ಮೇಲೆ ಆತನಿಗೆ ಪ್ರೀತಿ ಆಗುತ್ತದೆ. ಆದರೆ ಆಕೆ ಮಂಗಳಮುಖಿ ಆಗಿರುತ್ತಾಳೆ. ಆಕೆ ಹಾಗೂ ಆತ ಒಂದಾಗುತ್ತಾರಾ? ಅವರ ಪ್ರೀತಿಗೆ ಎದುರಾಗುವ ಅಡ್ಡಿ-ಆತಂಕ. ಅವರ ಪ್ರೀತಿಯನ್ನು ಸಮಾಜ ನೋಡುವ ರೀತಿ, ಮಂಗಳಮುಖಿಯ ಜೀವನ ಸೇರಿ ಇತರೆ ವಿಷಯಗಳ ಬಗ್ಗೆ ಸಿನಿಮಾ ತಿಳಿಸುತ್ತದೆ.
ಸಾನಿಯಾ ಸಯೀದ್ ಜೊತೆ ಅಲಿ ಜುನೇಜೊ, ಅಲೀನಾ ಖಾನ್, ರಸ್ತಿ ಫಾರೂಕ್, ಸಲ್ಮಾನ್ ಪಿರ್ಜಾದಾ ಮತ್ತು ಸೊಹೈಲ್ ಸಮೀರ್ ಸಿನಿಮಾದ ಮುಖ್ಯ ಪಾತ್ರಧಾರಿಗಳು. ಚಿತ್ರವನ್ನು ಅಪೂರ್ವ ಗುರು ಚರಣ್, ಸರ್ಮದ್ ಸುಲ್ತಾನ್ ಖೂಸಾತ್ ಮತ್ತು ಲಾರೆನ್ ಮನ್ ನಿರ್ಮಿಸಿದ್ದು, ಚಿತ್ರ ಈಗಾಗಲೇ ಕೆಲ ಚಿತ್ರೋತ್ಸವದಲ್ಲಿ ಭಾಗಿಯಾಗಿ ಪ್ರಶಸ್ತಿ ಮತ್ತು ಮೆಚ್ಚುಗೆ ಗಳಿಸಿದೆ.