ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ನಟ ಜಗ್ಗೇಶ್ ಸಿನಿಮಾ ಜತೆಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸನ್ನು ಹೊಂದಿದ್ದಾರೆ. ನಟನೆ ಜತೆಗೆ ಕನ್ನಡ ಭಾಷೆ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುವ ಅವರು, ಚಿತ್ರರಂಗದ ಹೊಸ ಪ್ರತಿಭೆಗಳನ್ನು ಬೆಳೆಸುವ ಗುಣ ಹೊಂದಿದ್ದಾರೆ. ನಿಜ ಜೀವನದಲ್ಲೂ ಪ್ರೀತಿಸಿ ಮದುವೆ ಆಗಿರುವ ಜಗ್ಗೇಶ್ ಅವರಿಗೆ ಕಾಲೇಜು ದಿನಗಳಲ್ಲಿ ಬಹುಭಾಷಾ ನಟಿ ಭಾರತಿಯವರು ಇಷ್ಟ ಅಂತಾ ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ.
ಅಷ್ಟಕ್ಕೂ ಜಗ್ಗೇಶ್ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳಲು ಕಾರಣ ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ 'ಪದವಿ ಪೂರ್ವ' ಸಿನಿಮಾ. ಹರಿಪ್ರಸಾದ್ ಜಯಣ್ಣ ಆ್ಯಕ್ಷನ್ ಕಟ್ ಹೇಳಿರುವ, ಯುವ ನಟ ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಅಭಿನಯದ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ವಿಶೇಷ ಅತಿಥಿಯಾಗಿ ಆಗಮಿಸಿದ್ದ ಜಗ್ಗೇಶ್ ಅವರು 15 ಹಾಗೂ 16ನೇ ವಯಸ್ಸಿನ ಹುಡುಗ ಹುಡುಗಿಯ ಮನಸ್ಥಿತಿ ಬಗ್ಗೆ ತಮ್ಮದೇ ಶೈಲಿಯಲ್ಲಿ ಹೇಳಿದರು.