'ರೋಮಿಯೋ' ಹಾಗೂ ಇತ್ತೀಚೆಗೆ 'ಲವ್ ಬರ್ಡ್ಸ್' ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಪಿ.ಸಿ. ಶೇಖರ್ ಈಗ ಪ್ರಯೋಗಾತ್ಮಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ BAD ಅಂತ ಟೈಟಲ್ ಇಟ್ಟಿದ್ದಾರೆ. ಪ್ರೀತಿಯ ರಾಯಭಾರಿ ಸಿನಿಮಾ ಖ್ಯಾತಿಯ ನಕುಲ್ ಗೌಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಪಿ.ಸಿ. ಶೇಖರ್, ಸಿನಿಮಾಗೆ BAD ಎಂದು ಹೆಸರಿಡಲು ಕಾರಣವಿದೆ. ಇದರಲ್ಲಿ ನಾಯಕ ಹಾಗೂ ನಾಯಕಿ ಅಂತ ಯಾರೂ ಇಲ್ಲ. ಎಲ್ಲ ವಿಲನ್ ಪಾತ್ರಗಳೇ ಇವೆ. ಅದರಲ್ಲಿ ಮುಖ್ಯ ವಿಲನ್ಗಳಿರುತ್ತಾರಷ್ಟೇ. "ರೋಷಮಾನ್ ಎಫೆಕ್ಟ್" ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಜಪಾನ್ ನಿರ್ದೇಶಕರೊಬ್ಬರು ಈ ವಿಧಾನವನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದ್ದರು. ಕನ್ನಡದಲ್ಲಿ ಇದರ ಬಳಕೆಯಾಗಿರುವುದು ವಿರಳ ಎನ್ನಬಹುದು. ಒಂದೇ ಕಥೆಯನ್ನೇ ಬೇರೆ ಬೇರೆಯವರು ಹೇಳುವ ವಿಧಾನ ಬೇರೆ ರೀತಿ ಆಗಿರುತ್ತದೆ.
ಅರ್ಜುನ್ ಜನ್ಯ ಸಂಗೀತ: ಚಿತ್ರೀಕರಣ ಮುಕ್ಕಾಲು ಭಾಗ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದು ನನ್ನ ನಿರ್ದೇಶನದ ಹತ್ತನೇ ಚಿತ್ರ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ನನ್ನ ನಿರ್ದೇಶನದ ಹತ್ತು ಚಿತ್ರಗಳಲ್ಲಿ ಒಂಭತ್ತು ಚಿತ್ರಗಳಿಗೆ ಅರ್ಜುನ್ ಜನ್ಯ ಅವರೇ ಸಂಗೀತ ನೀಡಿದ್ದಾರೆ. ನಾನೇ ಕಥೆ, ಚಿತ್ರಕಥೆ ರಚಿಸಿದ್ದೇನೆ. ಸಂಕಲನವನ್ನೂ ಮಾಡುತ್ತಿದ್ದೇನೆ. ನನ್ನ ಹಿಂದಿನ "ರಾಗ ಹಾಗೂ "ದಿ ಟೆರರಿಸ್ಟ್" ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಸಚಿನ್ ಬಿ ಹೊಳಗುಂಡಿ ಈ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಜಿ. ರಾಜಶೇಖರ್ ಅವರ ಕಲಾ ನಿರ್ದೇಶನವಿದೆ ಎಂದಿದ್ದಾರೆ.