ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ಸೂಪರ್ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಈ ಮೂಲಕ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿದೆ. ಈ ಪ್ರಶಸ್ತಿಯನ್ನು ನಾಟು ನಾಟು ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ನಿರೂಪಕರಾದ ಜಾನೆಲ್ಲೆ ಮೊನೆ ಮತ್ತು ಕೇಟ್ ಹಡ್ಸನ್ ಅವರು ಅತ್ಯುತ್ತಮ ಮೂಲ ಗೀತೆ ವಿಜೇತರನ್ನು ಘೋಷಿಸುತ್ತಿದ್ದಂತೆ ಆರ್‌ಆರ್‌ಆರ್ ತಂಡ ಭಾವುಕರಾದರು. ನಿರ್ದೇಶಕ ರಾಜಮೌಳಿ ಮತ್ತು ಅವರ ಕುಟುಂಬ ಎದ್ದು ನಿಂತು ಸಂತೋಷ ವ್ಯಕ್ತಪಡಿಸಿದರು. ಆರ್‌ಆರ್‌ಆರ್ ತಂಡವು ವೇದಿಕೆಯ ಮುಂಭಾಗದ ಕೊನೆಯ ಸಾಲಿನಲ್ಲಿ ಕುಳಿತಿದ್ದರು. ಪ್ರಶಸ್ತಿ ಘೋಷಿಸುವವರೆಗೂ ಉಸಿರನ್ನು ಬಿಗಿ ಹಿಡಿದು ಕಾಯುತ್ತಿದ್ದರು. ಅವಾರ್ಡ್ ಅನೌನ್ಸ್ ಆದ ತಕ್ಷಣ ರಾಜಮೌಳಿ ಸೇರಿದಂತೆ ತಂಡದವರು ಒಮ್ಮೆಲೇ ಹಾರಿ ಕುಣಿದರು.
ಇದನ್ನೂ ಓದಿ:RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಗರಿ!
ಸಂಗೀತ ಸಂಯೋಜಕ ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಂತೆ ಜೂನಿಯರ್ ಎನ್ಟಿಆರ್, ರಾಮ್ಚರಣ್ ಸೇರಿದಂತೆ ಆರ್‌ಆರ್‌ಆರ್ ತಂಡದವರು ವಿಜೇತರನ್ನು ಹುರಿದುಂಬಿಸಿದರು. ವೇದಿಕೆಯಲ್ಲಿ ಮಾತನಾಡಿದ ಕೀರವಾಣಿ, "ಧನ್ಯವಾದಗಳು ಅಕಾಡೆಮಿ. ನನ್ನ ಮನಸ್ಸಿನಲ್ಲಿ ಆಸ್ಕರ್ ಗೆಲ್ಲಬೇಕೆಂಬ ಆಸೆ ಇತ್ತು. ಕೊನೆಗೂ ಪಡೆದುಕೊಂಡಿದ್ದೇನೆ. ಹಾಗೆಯೇ ರಾಜಮೌಳಿ ಮತ್ತು ನನ್ನ ಕುಟುಂಬಕ್ಕೂ ಧನ್ಯವಾದಗಳು. ಆರ್‌ಆರ್‌ಆರ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆ" ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.