ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಆರ್ಆರ್ಆರ್ ಸಿನಿಮಾದ ಸೂಪರ್ ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ, ಹಾಗೆಯೇ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನ, ಗುನೀತ್ ಮೊಂಗಾ ನಿರ್ಮಾಣದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಭಾನುವಾರ ತಡರಾತ್ರಿ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ವರ್ಣರಂಜಿತ ಕಾರ್ಯಕ್ರಮ ನಡೆದಿತ್ತು. ಮಂಗಳವಾರ ತಡರಾತ್ರಿ ನಟ ಜೂ. ಎನ್ಟಿಆರ್ ದೇಶಕ್ಕೆ ವಾಪಸಾಗಿದ್ದರು. ಇದೀಗ ಆರ್ಆರ್ಆರ್ ತಂಡ, ಗುನೀತ್ ಮೊಂಗಾ ತಂಡ ಮರಳಿದ್ದಾರೆ. ಭಾರತದಲ್ಲಿ ಆಸ್ಕರ್ ವಿಜೇತರಿಗೆ ಆತ್ಮೀಯ, ಭವ್ಯ ಸ್ವಾಗತ ಕೋರಲಾಗಿದೆ. 'ನಾಟು ನಾಟು'ವಿನ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ನಿರ್ದೇಶಕ ರಾಜಮೌಳಿ ಅವರನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.
ನಟ ರಾಮ್ ಚರಣ್ ಕುಟುಂಬ ಕೂಡ ವಾಪಸ್ಸಾಗಿದೆ. ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಗಿದೆ. ಪತ್ನಿ ಉಪಾಸನಾ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾದ 10 ವರ್ಷಗಳ ನಂತರ ರಾಮ್ಚರಣ್ ಮತ್ತು ಉಪಾಸನಾ ಪೋಷಕರಾಗುತ್ತಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಮ್ ಚರಣ್ ಬಂದಿಳಿದರು. ಇಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಮ್ಚರಣ್, ಆಸ್ಕರ್ ವಿಜೇತ ನಾಟು ನಾಟು ಹಾಡನ್ನು ದೇಶದ ಹಾಡು, ಇದು ದೇಶದ ಗೆಲುವು ಎಂದು ಬಣ್ಣಿಸಿದರು.