ಕರ್ನಾಟಕ

karnataka

ETV Bharat / entertainment

ಆಸ್ಕರ್ ನಾಮನಿರ್ದೇಶಿತರಿಗೆ ಅಮೆರಿಕದಲ್ಲಿ ಲಂಚ್​ ಪಾರ್ಟಿ: 'ನಾಟು ನಾಟು' ಹಾಡಿನ ಸಂಯೋಜಕರೂ ಭಾಗಿ - ಆರ್​ಆರ್​ಆರ್​

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಟನ್ ಹೋಟೆಲ್‌ನಲ್ಲಿ ಆಸ್ಕರ್ ನಾಮನಿರ್ದೇಶಿತರಿಗೆ ಪಾರ್ಟಿ ಆಯೋಜನೆಗೊಂಡಿತ್ತು.

Oscar Nominees Luncheon 2023
ಆಸ್ಕರ್ ನಾಮನಿರ್ದೇಶಿತರಿಗೆ ಅಮೆರಿಕದಲ್ಲಿ ಲಂಚ್​ ಪಾರ್ಟಿ

By

Published : Feb 14, 2023, 4:23 PM IST

95ನೇ ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ಆರ್‌ಆರ್‌ಆರ್‌ ಚಿತ್ರದ 'ನಾಟು ನಾಟು' ಹಾಡಿನ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ದಿ ಅಕಾಡೆಮಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿ ಆಗಿದ್ದರು. 95ನೇ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಚಲನಚಿತ್ರ ತಾರೆಯರನ್ನು ದಿ ಅಕಾಡೆಮಿ ಆಯೋಜಿಸಿದ್ದ ಈ ಲಂಚ್ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಈ ಪಾರ್ಟಿಗೆ ಭಾರತೀಯ ಚಲನಚಿತ್ರೋದ್ಯಮದಿಂದ ಸಂಗೀತ ಸಂಯೋಜಕ ಎಂಎಂ ಕೀರವಾಣಿ, ಚಲನಚಿತ್ರ ನಿರ್ಮಾಪಕರಾದ ಗುನೀತ್ ಮೊಂಗಾ ಮತ್ತು ಶೌನಕ್ ಸೇನ್​ ಭಾಗಿಯಾಗಿದ್ದರು.

95ನೇ ಆಸ್ಕರ್ ನಾಮನಿರ್ದೇಶಿತರಿಗೆ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಟನ್ ಹೋಟೆಲ್‌ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಹಲವು ಪ್ರಶಸ್ತಿ ವಿಜೇತ ನಾಟು ನಾಟು ಹಾಡಿನ ಸಂಯೋಜಕ ಎಂಎಂ ಕೀರವಾಣಿ ಕೂಡ ಕಾಣಿಸಿಕೊಂಡರು. ಗುನೀತ್ ಮೊಂಗಾ ಮತ್ತು ಶೌನಕ್ ಸೇನ್ ಕೂಡ ಸ್ಟಾರ್ ಲಂಚ್ ಪಾರ್ಟಿಯಲ್ಲಿ ಉಪಸ್ಥಿತರಿದ್ದರು. ಹಾಲಿವುಡ್​​ ಚಲನಚಿತ್ರ ನಿರ್ದೇಶಕರಾದ ಸ್ಟೀವನ್ ಸ್ಪೀಲ್​​ಬರ್ಗ್, ರೋಗೆರ್ ಡೀಕಿನ್ಸ್ ಮತ್ತು ಜಸ್ಟಿನ್ ಹರ್ವಿಟ್ಜ್ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಇವರಷ್ಟೇ ಅಲ್ಲದೇ ಈಗಾಗಲೇ ಹಲವು ಬಾರಿ ನಾಮನಿರ್ದೇಶನಗೊಂಡಿರುವ ಅಮೆರಿಕದ ನಟರಾದ ಟಾಮ್ ಕ್ರೂಸ್, ಮಿಚೆಲ್ ವಿಲಿಯಮ್ಸ್, ಸಾರ್ಹಾ ಪೊಲ್ಲೆ, ರಿಯಾನ್ ಜಾನ್ಸನ್, ಮೇರಿ ಜೋಫ್ರೆಸ್ ಮತ್ತು ಡಯೇನ್ ವಾರೆನ್ ಕೂಡ ಆಗಮಿಸಿದ್ದರು. ಕೆನಡಾ - ಅಮೆರಿಕನ್ ನಟರಾದ ಬ್ರ್ಯಾಂಡನ್ ಫ್ರಸೆರ್, ಹಾಂಗ್ ಚೌ, ಆಸ್ಟಿನ್ ಬಟ್ಲರ್, ಕೆ ಹುಯಿ ಕ್ವಾನ್ ಮತ್ತು ಪೌಲ್ ಮೆಸ್ಕಲ್ ಅವರು ಮೊದಲ ಬಾರಿಗೆ ಆಸ್ಕರ್‌ಗೆ ನಾಮನಿರ್ದೇಶನಗೊಂಂಡಿದ್ದು, ಇವರುಗಳು ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ:ಪ್ರೇಮಿಗಳ ದಿನ 2023: ನಿಜ ಜೀವನದಲ್ಲೂ ಪ್ರಣಯ ಪಕ್ಷಿಗಳಾಗಿ ಗುರುತಿಸಿಕೊಂಡ ತಾರಾ ಜೋಡಿಗಳು

ಹಾಲಿವುಡ್​ನ ಡಾಲ್ಬಿ ಥಿಯೇಟರ್​ನಲ್ಲಿ ಮಾರ್ಚ್ 12ರಂದು 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಬಾರಿ ಮೂರು ಪ್ರಮುಖ ಭಾರತೀಯ ಚಿತ್ರಗಳು ಆಸ್ಕರ್ ಪ್ರಶಸ್ತಿಯ ರೇಸ್​ನಲ್ಲಿವೆ. ಆರ್‌ಆರ್‌ಆರ್‌ನ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ನಾಮ ನಿರ್ದೇಶನಗೊಂಡಿದೆ. ಈ ಹಿಂದೆ ಇದೇ ವಿಭಾಗದಲ್ಲಿ 'ನಾಟು ನಾಟು' ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿತ್ತು. ಶೌನಕ್ ಸೇನ್ ಅವರ 'ಆಲ್ ದಟ್ ಬ್ರೀಥ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಮತ್ತು ಗುನೀತ್ ಮೊಂಗಾ ಅವರ 'ದಿ ಎಲಿಫೆಂಟ್ ವಿಸ್ಪರ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ನಾಮ ನಿರ್ದೇಶನಗೊಂಡಿದೆ.

ಇದನ್ನೂ ಓದಿ:ಏರಿಳಿತಗಳ ನಡುವೆ ಪತಿಗೆ ಪತ್ನಿ ಸಾಥ್: ನವಜೋಡಿಗಳಿಗೆ ಸ್ಫೂರ್ತಿ ರಿಷಬ್​​ ಶೆಟ್ಟಿ ಪ್ರೇಮಕಥೆ

ಭಾರತದ ಸ್ಟಾರ್​ ಡೈರೆಕ್ಟರ್​ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್​ಆರ್​ಆರ್​ ಸಿನಿಮಾ ಭರ್ಜರಿ ಯಶಸ್ಸು ಕಂಡು ಹಲವು ದಾಖಲೆಗಳನ್ನು ಬರೆಯಿತು. ಚಿತ್ರದಲ್ಲಿ ಸೌತ್​ ಸೂಪರ್​​ ಸ್ಟಾರ್​ಗಳಾದ ರಾಮ್​​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅಮೋಘ ಅಭಿನಯ ಮಾಡಿದ್ದಾರೆ. ಬಹುಬೇಡಿಕೆ ತಾರೆಯರಾದ ಆಲಿಯಾ ಭಟ್​ ಮತ್ತು ಅಜಯ್​ ದೇವ್​ಗನ್​ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಈ ಚಿತ್ರದ ನಾಟು ನಾಟು ಹಾಡು ಕೂಡ ಅಭಿಮಾನಿಗಳ ಮನ ಗೆದ್ದು ಸೂಪರ್​ ಹಿಟ್​ ಆಗಿದೆ. ಚಂದ್ರಬೋಸ್ ಸಾಹಿತ್ಯಕ್ಕೆ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಬಹಳ ಆಕರ್ಷಕವಾಗಿ ನೃತ್ಯ ಮಾಡಿದ್ದಾರೆ. ವಿಭಿನ್ನ ಸಂಯೋಜನೆಯ ಈ ನೃತ್ಯ ನೋಡುಗರನ್ನು ಕೂಡ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಈ ಹಾಡು ಆಸ್ಕರ್​​ಗೆ ನಾಮನಿರ್ದೇಶನ ಆಗಿದ್ದು, ಗೆಲ್ಲುವ ಭರವಸೆಯಲ್ಲಿ ಭಾರತೀಯ ಚಿತ್ರತಂಡವಿದೆ.

ABOUT THE AUTHOR

...view details