ಇಡೀ ಭಾರತೀಯ ಸಿನಿ ರಂಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಚಿತ್ರ 'KGF 2'. ಕನ್ನಡ ಸಿನಿಮಾಗಳಿಗೆ ಮಹತ್ವ ತಂದು ಕೊಟ್ಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರವಿದು. ಸುಮಾರು 1,200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸದ್ದು ಮಾಡಿದ ಸೂಪರ್ ಹಿಟ್ ಚಿತ್ರ ಇಂದು ಒಂದು ವರ್ಷದ ಸಂಭ್ರಮದಲ್ಲಿದೆ. ಹೌದು, ಕಳೆದ ಏಪ್ರಿಲ್ 14ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಈ 'ಕೆಜಿಎಫ್ 2' ವರ್ಷ ಪೂರೈಸಿದೆ.
ಹೊಂಬಾಳೆ ಫಿಲ್ಮ್ಸ್ ಹರ್ಷ.... 'KGF 2' ಸಾರಥಿ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳುವ ಮೂಲಕ ಹರ್ಷ ವ್ಯಕ್ತಪಡಿಸಿದೆ. ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, 'ಒಂದು ವರ್ಷದ ಹಿಂದೆ, #KGFCchapter2 ಉಸಿರುಕಟ್ಟುವ ಕ್ರಿಯೆ, ತೀವ್ರವಾದ ಭಾವನೆಗಳು ಮತ್ತು ದೊಡ್ಡ ಪಾತ್ರಗಳಿಂದ ತುಂಬಿದ ಮರೆಯಲಾಗದ ಪ್ರಯಾಣ. ಚಿತ್ರದ ಬಿಡುಗಡೆಯು ಅಭಿಮಾನಿಗಳೊಂದಿಗಿನ ಹಬ್ಬಕ್ಕಿಂತ ಕಡಿಮೆ ಏನಲ್ಲ' ಎಂದು ಬರೆದುಕೊಂಡಿದೆ.
ಸಿನಿಮಾ ದೃಶ್ಯಗಳುಳ್ಳ ಒಂದು ವಿಶೇಷ ವಿಡಿಯೋವನ್ನೂ ಕೂಡ ಹಂಚಿಕೊಂಡಿದೆ. ''ಅತ್ಯಂತ ಶಕ್ತಿಯುತ ವ್ಯಕ್ತಿಯಿಂದ, ಶಕ್ತಿಯುತವಾದ ಭರವಸೆ. ಕೆಜಿಎಫ್ 2 ನಮ್ಮನ್ನು ಮರೆಯಲಾಗದ ಪಾತ್ರಗಳು ಮತ್ತು ಕ್ರಿಯೆಯೊಂದಿಗೆ ದೊಡ್ಡ ಪ್ರಯಾಣಕ್ಕೆ ಕರೆದೊಯ್ದಿದೆ. ಸಿನಿಮಾದ ಆಚರಣೆ, ದಾಖಲೆಗಳನ್ನು ಮುರಿಯುವುದು ಮತ್ತು ಹೃದಯಗಳನ್ನು ಗೆಲ್ಲುವುದು ನಡೆದಿದೆ. ಉತ್ತಮ ಕಥೆ ಹೇಳುವಿಕೆಗೆ ಒಂದು ವರ್ಷ'' ಎಂದು ಬರೆದು ಕೊಂಡಿದೆ.
KGF 3: ಸದ್ಯ ಹಂಚಿಕೊಂಡಿರುವ ಈ ವಿಶೇಷ ವಿಡಿಯೋದ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಮತ್ತು 3 ಎಂಬ ಪದ ಹೈಲೆಟ್ ಆಗಿದೆ. ಹಾಗಾಗಿ KGF (3) ಮುಂದುವರೆದ ಭಾಗ ಯಶ್ ಅವರ ಮುಂದಿನ ಚಿತ್ರ ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
'KGF 1' ನೋಡಿದ್ದ ಪ್ರೇಕ್ಷಕರಿಗೆ 'KGF 2' ಮನರಂಜನೆಯ ರಸದೌತಣ ಉಣಬಡಿಸಿತ್ತು. ಯಶ್ ಸ್ಟೈಲ್, ಅತ್ಯದ್ಭುತ ಅಭಿನಯ, ಮೇಕಿಂಗ್ ಶೈಲಿ, ಕಥೆ ರವಾನಿಸಿದ ರೀತಿ ಎಲ್ಲವೂ ಅಭಿಮಾನಿಗಳ ಮನ ಮುಟ್ಟಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿಯಾಗಿ ತೆರೆಕಂಡ ಈ ಚಿತ್ರ ದೇಶದ ಮೂಲೆ ಮೂಲೆಯ ಪ್ರೇಕ್ಷಕರನ್ನು ತಲುಪಿತ್ತು. ಕೇವಲ ಸಿನಿಪ್ರಿಯರು ಮಾತ್ರವಲ್ಲದೇ ಸ್ಟಾರ್ ಸೆಲೆಬ್ರಿಟಿಗಳು ಸಹ ಯಶ್ ನಟನೆ ಬಗ್ಗೆ ಮಾತನಾಡುವಂತಾಯ್ತು. ಬರೋಬ್ಬರಿ 1,200 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆಗಳನ್ನು ಪುಡಿಗಟ್ಟಿತು 'KGF 2'.
ಇದನ್ನೂ ಓದಿ:ಸಿನಿ ಜಗತ್ತಿನಿಂದ ರಾಜಕೀಯಕ್ಕೆ ಬಂದ ಕಲಾವಿದರು: ನೆಲೆಯೂರಿದವರೆಷ್ಟು, ವಾಪಸಾದವರೆಷ್ಟು?
'KGF 2' ತೆರೆಕಂಡು ಒಂದು ವರ್ಷವಾದರೂ ಕೂಡ ನಟ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಈವರೆಗೂ ಅಧಿಕೃತ ಘೋಷಣೆ ಆಗಿಲ್ಲ. 'ರಾಕಿಂಗ್ ಸ್ಟಾರ್ 19 ಸಿನಿಮಾ' ಟ್ರೆಂಡಿಗ್ನಲ್ಲಿದ್ದು, ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಕೊಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು?, ನಟಿ ಯಾರು? ಯಾವ ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಲಿದ್ದಾರೆ? ಯಾವ ಸಂಸ್ಥೆಯಿಂದ ಚಿತ್ರ ನಿರ್ಮಾಣವಾಗಲಿದೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಸಿನಿಮಾ ನಿರ್ಮಿಸಲಿದ್ದಾರೆ ತೆಲುಗಿನ ದಿಲ್ ರಾಜು
ತೆಲುಗಿನ ದಿಲ್ ರಾಜು ಅವರ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಸಿನಿಮಾ ನಿರ್ಮಾಣ ಆಗಲಿದೆ ಎಂಬ ವಿಷಯ ಇತ್ತೀಚೆಗಷ್ಟೇ ಸದ್ದು ಮಾಡಿದೆ. ಕೆಲ ದಿನಗಳ ಹಿಂದೆ ನಿರ್ಮಾಪಕ ದಿಲ್ರಾಜು #askdilraju ಸೆಷನ್ ನಡೆಸಿದರು. ಆ ಸಂದರ್ಭ ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ? ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ದಿಲ್ ರಾಜು 'ಹೌದು' ಎಂದು ಪ್ರತಿಕ್ರಿಯಿಸಿದ್ದರು. ಹಾಗಾಗಿ ಯಶ್ ಅಭಿಮಾನಿಗಳಲ್ಲಿ ಮುಂದಿನ ಚಿತ್ರದ ಬಗ್ಗೆ ತೀವ್ರ ಕುತೂಹಲವಿದೆ. ಆದ್ರೆ ಯಶ್ ಆಪ್ತರ ಪ್ರಕಾರ, ದಿಲ್ ರಾಜು ಯಶ್ ಅವರ 20ನೇ ಸಿನಿಮಾ ಮಾಡ್ತಾರೆ. ಹೀಗಾಗಿ ಯಶ್ 19ನೇ ಸಿನಿಮಾ ಯಾವುದು, ಯಾರಿಂದ ಎಂಬ ಕುರಿತು ಚರ್ಚೆ ಜೋರಾಗಿದೆ.