ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಹಾಗೂ ಹೊಸ ಚಿತ್ರತಂಡದವರಿಗೆ ಸಹಾಯವಾಗಲಿ ಎಂದು ನಿರ್ದೇಶಕ ಹಾಗೂ ಎಂಎಂಬಿ ಲೆಗಸಿಯ ಮುಖ್ಯಸ್ಥ ನವರಸನ್ 'MMB legacy' ಹೆಸರಿನಲ್ಲಿ ಈವೆಂಟ್ ಹಾಗೂ ಮಾಧ್ಯಮಗೋಷ್ಟಿಗಳನ್ನು ನಡೆಸಲು ಸುಸಜ್ಜಿತವಾದ ಸಭಾಂಗಣವನ್ನು ಆರಂಭಿಸಿ ಒಂದು ವರ್ಷವೇ ಆಗಿದೆ. ಈ ಸಂಭ್ರಮವನ್ನು ಆಚರಿಸಲು ನವರಸನ್ ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಮಾರಂಭಕ್ಕೆ ಸಿನಿ ತಾರೆಯರಾದ ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ ಸಾಕ್ಷಿಯಾಗಿ, ಮೈ ಮೂವೀ ಬಜಾರ್ನ ಪ್ರಶಸ್ತಿಯನ್ನು ಅನಾವರಣ ಮಾಡಿದರು.
ಈ ವೇಳೆ ಮಾತನಾಡಿದ ನವರಸನ್, "ಎಂಎಂಬಿ ಲೆಗಸಿ ಕಳೆದ ವರ್ಷ ನವೆಂಬರ್ನಲ್ಲಿ ಆರಂಭವಾಗಿತ್ತು. ಈ ಒಂದು ವರ್ಷದಲ್ಲಿ ಮಾಧ್ಯಮಗೋಷ್ಟಿಗಳು ಹಾಗೂ ಹಲವಾರು ಈವೆಂಟ್ಗಳು ಸೇರಿದಂತೆ 216 ಕಾರ್ಯಕ್ರಮಗಳು ನಡೆದಿವೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಅನುಕೂಲವಾಗುವಾಗಲೆಂದು ಯೋಚಿಸಿ ಈ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಸಭಾಂಗಣ ನಿರ್ಮಿಸಲು ಜಾಗ ನೀಡಿದ ಆನಂದ್ ಅವರಿಗೆ ಸಹಕಾರ ನೀಡುತ್ತಿರುವ ಚಿತ್ರೋದ್ಯಮದ ಗಣ್ಯರಿಗೆ ನನ್ನ ಕೃತಜ್ಞತೆಗಳು" ಎಂದರು.
ಮೈ ಮೂವೀ ಬಜಾರ್ ಪ್ರಶಸ್ತಿ ಪ್ರದಾನ;"ಇದರ ಜೊತೆಗೆ ಇಂತಹ ಸುಂದರ ಸಭಾಂಗಣಗಳನ್ನು ಬೆಂಗಳೂರು ಅಷ್ಟೇ ಅಲ್ಲದೇ, ಮುಂಬೈ ಮುಂತಾದ ಕಡೆ ತೆರೆಯುವ ಆಲೋಚನೆ ಇದೆ. ದೇಶದ ಎಲ್ಲಾ ಚಿತ್ರರಂಗಗಳ ಬಗ್ಗೆ ಮಾಹಿತಿಯನ್ನು ನೀಡುವ ಆ್ಯಪ್ ಒಂದನ್ನು ಬಿಡುಗಡೆ ಮಾಡುವ ಸಿದ್ಧತೆ ಕೂಡ ನಡೆಯುತ್ತಿದೆ" ಎಂದು ತಿಳಿಸಿದರು.