ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನವಾಗುತ್ತಿದೆ. ವಿಭಿನ್ನ ಬಗೆಯ ಕಥಾಹಂದರವುಳ್ಳ ಚಿತ್ರಗಳ ಮೂಲಕ ಹೊಸಬರು ಪ್ರೇಕ್ಷಕರೆದುರು ಬರುತ್ತಿದ್ದಾರೆ. ಕಂಟೆಂಟ್ಗೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ. ಹೊಸ ತಂಡದಿಂದ ನಿರ್ಮಾಣಗೊಳ್ಳುತ್ತಿರುವ ಸಿನಿಮಾವೇ 'ಒನ್ ಅಂಡ್ ಹಾಫ್'.
ಒನ್ ಅಂಡ್ ಹಾಫ್ ಸಿನಿಮಾದ ಫಸ್ಟ್ ಲುಕ್: ರಂಗ್ಬಿರಂಗಿ, ಡೇವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಪರಿಚಿತರಾಗಿರುವ ಶ್ರೇಯಸ್ ಚಿಂಗಾ ಅವರು 'ಒನ್ ಅಂಡ್ ಹಾಫ್' ಸಿನಿಮಾ ಮೂಲಕ ನಿರ್ದೇಶಕರ ಕುರ್ಚಿ ಅಲಂಕರಿಸಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಈ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೇಯಸ್ ಚಿಂಗಾ ಜೊತೆ ಟಗರು ಪುಟ್ಟಿ ಮಾನ್ವಿತಾ ಹರೀಶ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸುಲಕ್ಷ್ಮೀ ಫಿಲಂಸ್ ನಿರ್ಮಾಣ ಸಂಸ್ಥೆಯ ಲೋಗೋ ಮತ್ತು ಒನ್ ಅಂಡ್ ಹಾಫ್ ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದೆ.
ಶ್ರೇಯಸ್ ಚಿಂಗಾ ಮಾತನಾಡಿ, ''ಒನ್ ಅಂಡ್ ಹಾಫ್'' ಕಂಪ್ಲೀಟ್ ಕಾಮಿಡಿ ಸಿನಿಮಾ. ಶೂಟಿಂಗ್ ಇಂದು ಶುರುವಾಗಿದೆ. ಮಾನ್ವಿತಾ ಹರೀಶ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಗೋವಾ ಭಾಗದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಮಣಿಕಾಂತ್ ಕದ್ರಿ ಅವರ ಸಂಗೀತ ನಮ್ಮ ಸಿನಿಮಾಗಿರಲಿದೆ ಎಂದು ತಿಳಿಸಿದರು.
ನಟಿ ಮಾನ್ವಿತಾ ಹರೀಶ್ ಮಾತನಾಡಿ, ಈ ಸಿನಿಮಾ ಮಾಡಲು ಬಹಳ ಕಾರಣಗಳಿವೆ. ಶ್ರೇಯಸ್ ಅವರು ಹೇಳಿದ ಕಥೆ ಇಷ್ಟವಾಯ್ತು. ಅವರು ಉತ್ತಮ ನಟ, ಬರಹಗಾರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿದ್ದೇನೆ. ನನ್ನ ಪಾತ್ರದ ಹೆಸರು ನಿಧಿ, ಟ್ರಬಲ್ ಮೇಕರ್. ಒಂದೊಳ್ಳೆ ಪಾತ್ರ ಎಂದು ಸಂತಸ ಹಂಚಿಕೊಂಡರು.