ಮಲಯಾಳಿಗರು ಅದ್ಧೂರಿಯಾಗಿ ಆಚರಿಸುವ ಹಬ್ಬ 'ಓಣಂ'. ಕೇರಳದ ಪ್ರತಿ ಮನೆಗಳಲ್ಲಿ ಸುಂದರವಾದ ಪೂಕ್ಕಳಂ ಬಿಡಿಸಿ, ಹೊಸ ಉಡುಪಿ ಧರಿಸಿ, ಬಾಳೆಎಲೆಯಲ್ಲಿ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯಗಳನ್ನು ಬಡಿಸಿ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಓಣಂ ಶುಭ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ನಿಂದ ದುಲ್ಕರ್ ಸಲ್ಮಾನ್ವರೆಗೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಮೋಹನ್ಲಾಲ್ ಅವರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 63 ವರ್ಷ ವಯಸ್ಸಿನ ಸೂಪರ್ಸ್ಟಾರ್ ಓಣಂ ಹಬ್ಬಕ್ಕೆ ಶುಭಕೋರಿದ್ದು, ವಿಡಿಯೋದಲ್ಲಿ ಎಂದಿನಂತೆ ಆಕರ್ಷಕವಾಗಿ ಕಂಡಿದ್ದಾರೆ. ವೈಟ್ ಶರ್ಟ್ ಮತ್ತು ವೈಟ್ ಪಂಚೆಯಲ್ಲಿ ಕಂಗೊಳಿಸಿದ್ದಾರೆ. ನಟ ದುಲ್ಕರ್ ಸಲ್ಮಾನ್ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳಿಗೆ ಓಣಂ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಅವರ 'ಕಿಂಗ್ ಆಫ್ ಕೋಥಾ' ಸಿನಿಮಾ ಥಿಯೇಟರ್ನಲ್ಲಿ ಈಗಾಗಲೇ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಎಲ್ಲರೂ ಕುಟುಂಬ ಸಮೇತರಾಗಿ ವೀಕ್ಷಿಸಿ ಎಂಜಾಯ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ನಟ ದಂತದ ವರ್ಣದ ಕುರ್ತಾದಲ್ಲಿ ಮತ್ತಷ್ಟು ಹ್ಯಾಂಡ್ಸಮ್ ಆಗಿ ಕಂಡಿದ್ದಾರೆ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಓಂ ಶುಭಾಶಯ ಕೋರಲು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯನ್ನು ಬಳಸಿಕೊಂಡರು. "ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ಈ ಸುಂದರ ಮತ್ತು ಸಾಂಪ್ರದಾಯಿಕ ಹಬ್ಬ ನಿಮಗೆಲ್ಲಾ ಸಂತೋಷವನ್ನು ನೀಡಲಿ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಮಾಲಿವುಡ್ ನಟ ದಿಲೀಪ್ ಅವರ ಮುಂಬರುವ ಚಿತ್ರ ಬಾಂದ್ರಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿರುವ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಓಣಂ ಹಬ್ಬದ ಶುಭಾಶಯ ಕೋರಿದ್ದಾರೆ.