ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ 'OMG 2'. ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ 'ಓಎಂಜಿ 2' ಇದೀಗ ಟ್ರೇಲರ್ ಮೂಲಕ ನಿಮ್ಮ ಮುಂದೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಭಾರೀ ಸದ್ದು ಮಾಡುತ್ತಿದೆ. ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಆಗಸ್ಟ್ 2 ರಂದು ಟ್ರೇಲರ್ ಅನ್ನು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಈ ಮೊದಲು ನಿರ್ಧರಿಸಿತ್ತು. ಆದರೆ, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅವರು ನಿನ್ನೆಯಷ್ಟೇ ನಿಧನರಾದರು. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ಅತಿ ದೊಡ್ಡ ಆಸ್ತಿನೇ ಆಗಿದ್ದ ನಿತಿನ್ ದೇಸಾಯಿ ಮರಣ ಅಕ್ಷಯ್ ಕುಮಾರ್ ಅವರಿಗೆ ನೋವು ತಂದಿತ್ತು. ಈ ಕಾರಣಕ್ಕಾಗಿ ನಿನ್ನೆ (ಬುಧವಾರ) ಬಿಡುಗಡೆಯಾಗಬೇಕಿದ್ದ ಟ್ರೇಲರ್ ಅನ್ನು ಇಂದು ರಿಲೀಸ್ ಮಾಡಲಾಗಿದೆ.
ಆಗಸ್ಟ್ 11 ರಂದು ಬಿಡುಗಡೆ: ಪಂಕಜ್ ತ್ರಿಪಾಠಿ ಅವರ ಪಾತ್ರವನ್ನು ಭಗವಾನ್ ಶಿವನ ಕಟ್ಟಾ ಭಕ್ತನಾಗಿ ತೋರಿಸಲಾಗಿದೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಓಎಂಜಿ ಸಿನಿಮಾದಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಅವರು ವಕೀಲರ ಪಾತ್ರ ಮಾಡುತ್ತಿದ್ದಾರೆ. ಓಎಂಜಿ 2 ಪರೇಶ್ ರಾವಲ್ ಮತ್ತು ಅಕ್ಷಯ್ ನಟಿಸಿದ್ದ ಓ ಮೈ ಗಾಡ್ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಅಮಿತ್ ರೈ ನಿರ್ದೇಶನದ ಸಿನಿಮಾ ಆಗಸ್ಟ್ 11 ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಇದೇ ಸಮಯದಲ್ಲಿ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ 2 ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್ನಲ್ಲಿ ಸ್ಪರ್ಧೆ ಏರ್ಪಡಲಿದೆ.