ಬಾಲಿವುಡ್ ಕಿಲಾಡಿ ಜನಪ್ರಿಯತೆಯ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ OMG 2. ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾವಿದು. ಚಿತ್ರತಂಡ ಇಂದು ಸಿನಿಮಾದ ಮೊದಲ ಹಾಡು ಊಂಚಿ ಊಂಚಿ ವಾದಿ (Oonchi Oonchi Waadi) ಅನಾವರಣಗೊಳಿಸಿದೆ. ಈ ಹಾಡಿನಲ್ಲಿ ಪಂಕಜ್ ತ್ರಿಪಾಠಿ ಅವರ ಪಾತ್ರವನ್ನು ಭಗವಾನ್ ಶಿವನ ಕಟ್ಟಾ ಭಕ್ತನಾಗಿ ತೋರಿಸಲಾಗಿದೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ.
"ಊಂಚಿ ಊಂಚಿ ವಾದಿ"ಯನ್ನು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ "ಭೋಲೆ ಶಂಕರ್, ಊಂಚಿ ಊಂಚಿ ವಾದಿ ಹಾಡು ರಿಲೀಸ್'' ಎಂದು ಬರೆದಿದ್ದಾರೆ. ಹಂಸರಾಜ್ ರಘುವಂಶಿ ದನಿ ನೀಡಿದ್ದು, ಸಾಹಿತ್ಯ ರಚನೆ ಕೆಲಸವನ್ನು ಕಬೀರ್ ಶುಕ್ಲಾ ಮತ್ತು ಡಿಜೆ ಸ್ಟ್ರಿಂಗ್ಸ್ ಮಾಡಿದ್ದಾರೆ. ಹಂಸರಾಜ್, ಡಿಜೆಸ್ಟ್ರಿಂಗ್ಸ್ ಮತ್ತು ರಾಹಿ ಜಂಟಿಯಾಗಿ ಸಂಯೋಜಿಸಿದ್ದಾರೆ.
ಊಂಚಿ ಊಂಚಿ ವಾದಿ ಹಾಡು ಪಂಕಜ್ ಅವರ ಪಾತ್ರವಾದ ಕಾಂತಿ ಶರಣ್ ಮುದ್ಗಲ್ ಬಗ್ಗೆ ಹೇಳುತ್ತದೆ. ಶಿವನ ಕುರಿತ ಅಚಲ ಭಕ್ತಿಯನ್ನು ಹಾಡು ಪ್ರದರ್ಶಿಸುತ್ತದೆ. ಅಕ್ಷಯ್ ಕುಮಾರ್ ಭಗವಾನ್ ಶಿವನಾಗಿ ಕಾಂತಿ ಕುಟುಂಬದ ಸಹಾಯಕ್ಕೆ ಬರುತ್ತಾರೆ. ಇದೇ ಈ ಚಿತ್ರದ ಹೂರಣ.
ಇತ್ತೀಚೆಗಷ್ಟೇ ಟೀಸರ್ ಅನಾವರಣಗೊಂಡಿತ್ತು. ರೈಲ್ವೇ ನೀರಿನಿಂದ ಶಿವನಿಗೆ ರುದ್ರಾಭಿಷೇಕ ಮಾಡುವ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ, ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CFBC) ಚಿತ್ರದ ಬಿಡುಗಡೆಗೆ ಪ್ರಮಾಣಪತ್ರ ನೀಡಲು ನಿರಾಕರಿಸಿ, ಪರಿಶೀಲನಾ ಸಮಿತಿಗೆ ರವಾನಿಸಿತ್ತು.