ಉಪೇಂದ್ರ ಮತ್ತೆ ಬಾ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಓಂ ಸಿನಿಮಾ ಖ್ಯಾತಿಯ ಪ್ರೇಮಾ ಈ ಚಿತ್ರದ ಆದ್ಮಲೇ ಒಳ್ಳೆ ಕಥೆಯ ಸಿನಿಮಾ ಬಂದರೆ ಮಾಡ್ತೀನಿ ಅಂದಿದ್ದರು. ಇದೀಗ ವಿಭಿನ್ನ ಟೈಟಲ್ ಇರುವ ವರಾಹಚಕ್ರಂ ಎಂಬ ಸಂದೇಶ ಕೊಡುವ ಚಿತ್ರದಲ್ಲಿ ನಟಿ ಪ್ರೇಮಾ ಅಭಿನಯಿಸುವ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದಶಕದ ಹಿಂದೆ ಮನಸುಗಳ ಮಾತು ಮಧುರ, ಯುಗಪುರುಷ, ಗೌರೀಪುತ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್ ಮಟ್ಟಿ ಅವರು ಬಹಳ ವರ್ಷಗಳ ನಂತರ, ಆಧುನಿಕ ಪಂಚ ಪಾಂಡವರನ್ನಿಟ್ಟುಕೊಂಡು, ವಿಭಿನ್ನ ಕಥಾನಕದೊಂದಿಗೆ ಚಿತ್ರ ನಿರ್ದೇಶನ ಮಾಡಲಿದ್ದಾರೆ. ವರಾಹಚಕ್ರಂ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಈ ಹೊಸ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ, ನಾನು ನಟ ಆಗಬೇಕೆಂದೇ ಫಿಲಂ ಇಂಡಸ್ಟ್ರಿಗೆ ಬಂದವನು. ನಿರ್ಮಾಪಕನಾಗಿ ಒಂದಷ್ಟು ಕಳೆದುಕೊಂಡೆ, ಸಿನಿಮಾ ವಿತರಣೆ ಕೂಡ ಮಾಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ರೂಲ್ಸ್, ಸಂಸ್ಕೃತಿಯ ಕಗ್ಗೊಲೆ, ದೌರ್ಜನ್ಯಗಳಿಗೆ ಫುಲ್ ಸ್ಟಾಪ್ ಕೊಟ್ಟು ಅವೇರ್ನೆಸ್ ನೀಡುವ ಕಥೆ ಇಟ್ಟುಕೊಂಡು ವರಾಹಚಕ್ರಂ ಕಥೆ ಹೆಣೆದಿದ್ದೇನೆ. ಇದರಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿವೆ. ಪ್ರೇಮಾ ಅವರ ನಮ್ಮೂರ ಮಂದಾರ ಹೂವೆ ಸಿನಿಮಾ ನೋಡಿ ನಾನು ನಿರ್ದೇಶಕನಾಗಬೇಕೆಂದು ಕನಸು ಕಂಡಿದ್ದೆ. ಈಗ ಅವರನ್ನು ಹಾಕಿಕೊಂಡೇ ಸಿನಿಮಾ ಮಾಡುತ್ತಿದ್ದೇನೆ. ಅವರದು ಗಟ್ಟಿಯಾದ ಪಾತ್ರ, ಆ್ಯಕ್ಷನ್ ಕೂಡ ಮಾಡ್ತಿದ್ದಾರೆ. ಸಾಯಿಕುಮಾರ್ ಅವರೂ ಸಹ ಕಥೆ ಕೇಳಿ ಒಪ್ಪಿದರು. ಹಿಂದೆ ನನ್ನ ಯುಗಪುರುಷ ಸಿನಿಮಾದಲ್ಲಿ ನಟಿಸಿದ್ದ ಅರ್ಜುನ್ ದೇವ ನಾಯಕನಾಗಿ ನಟಿಸುತ್ತಿದ್ದಾರೆ. ಅವರ ಜೊತೆ ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರದ ಬಗ್ಗೆ ವಿವರಿಸಿದರು.