ಭುವನೇಶ್ವರ (ಒಡಿಶಾ):ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಒಡಿಶಾದ ಜನಪ್ರಿಯ ನಟ ಪಿಂಟು ನಂದ(47) ಕಳೆದ ರಾತ್ರಿ ಹೈದರಾಬಾದ್ನಲ್ಲಿ ನಿಧನರಾದರು. ಇಲ್ಲಿನ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಡರಾತ್ರಿ 11.25 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಯಕೃತ್ ಕಸಿ ಚಿಕಿತ್ಸೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ.
ದೀರ್ಘಕಾಲದಿಂದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಪಿಂಟು ನಂದ ಯಕೃತ್ ವೈಪಲ್ಯಗೊಂಡು ಕಳೆದ ಕೆಲವು ದಿನಗಳಿಂದ ಭುನೇಶ್ವರದ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಯಕೃತ್ ವೈಫಲ್ಯಗೊಂಡ ಕಾರಣ ಮುಂದಿನ ಆರು ತಿಂಗಳೊಳಗೆ ಯಕೃತ್ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಇತ್ತೀಚೆಗೆ ಅವರ ಆರೋಗ್ಯಸ್ಥಿತಿ ಚಿಂತಾಜನಕವಾಗಿತ್ತು. ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಫೆಬ್ರವರಿ 7 ರಂದು ಮೊದಲು ಕಸಿ ಚಿಕಿತ್ಸೆಗಾಗಿ ದೆಹಲಿಗೂ ಕರೆದೊಯ್ಯಲಾಗಿತ್ತು.
ಆದರೆ ದೆಹಲಿಯಲ್ಲಿ ದಾನಿಗಳ ಅಲಭ್ಯತೆಯಿಂದಾಗಿ ಪಿಂಟು ಅವರನ್ನು ಫೆಬ್ರುವರಿ 25ರಂದು ಹೈದರಾಬಾದ್ಗೆ ಸ್ಥಳಾಂತರಿಸಲಾಗಿತ್ತು. ಕುಟುಂಬದ ಸದಸ್ಯರು ಯಕೃತ್ ದಾನ ಮಾಡಬೇಕಾಗಿತ್ತು. ಆದರೆ ರಕ್ತದ ಗುಂಪಿನ ಹೊಂದಾಣಿಕೆ ಮತ್ತು ಇತರ ಕಾರಣಗಳಿಂದ ಕಾರ್ಯರೂಪಕ್ಕೆ ಬರಲಿಲ್ಲ. ದಾನಿಯನ್ನು ವ್ಯವಸ್ಥೆ ಮಾಡುವ ಮೊದಲೇ ನಂದ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡು, ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಚಿಕಿತ್ಸೆಗೆ ಸ್ಪಂದಿಸದೆ ನಟ ಕೊನೆಯುಸಿರೆಳೆದಿದ್ದಾರೆ.