ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀಪ್ರಸಾದ್ ಅಲಿಯಾಸ್ ಡಿಎಸ್ಪಿ ಅವರು ಟಿ-ಸೀರಿಸ್ ಜೊತೆ ಕೈಜೋಡಿಸಿ 'ಓ ಪರಿ' ಎಂಬ ಹಿಂದಿ ಹಾಡನ್ನು ಹೊರ ತಂದಿದ್ದು, ಅದನ್ನು ಇತ್ತೀಚೆಗೆ ಮುಂಬೈನಲ್ಲಿ ನಟ ರಣ್ವೀರ್ ಸಿಂಗ್ ಬಿಡುಗಡೆ ಮಾಡಿದ್ದರು. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೇ ತೆಲುಗು, ತಮಿಳು ಅವತರಣಿಕೆ ಬಿಡುಗಡೆ ಆಗಿದೆ. ಕನ್ನಡ ಮತ್ತು ಮಲಯಾಳಂನಲ್ಲೂ ಶೀಘ್ರದಲ್ಲೇ ಮೂಡಿಬರಲಿದೆ.
ಇದೀಗ 'ಓ ಪರಿ'ಯ ತಮಿಳಿನ ಅವತರಣಿಕೆಯಾದ 'ಓ ಪೆಣ್ಣೆ' ಮತ್ತು ತೆಲುಗು ಅವತರಣಿಕೆಯಾದ 'ಓ ಪಿಲ್ಲ' ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ತಮಿಳು ಮತ್ತು ತೆಲುಗು ಬಿಗ್ ಬಾಸ್ ಕಾರ್ಯಕ್ರಮಗಳಲ್ಲಿ ಎರಡೂ ಹಾಡುಗಳು ಬಿಡುಗಡೆಯಾಗಿದ್ದು, ತಮಿಳು ಹಾಡನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದರೆ, ತೆಲುಗು ಹಾಡನ್ನು ನಾಗಾರ್ಜುನ ಬಿಡುಗಡೆ ಮಾಡಿ ಡಿಎಸ್ಪಿಗೆ ಶುಭ ಕೋರಿದ್ದಾರೆ.
ಓ ಪಿಲ್ಲ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿರುವ ನಾಗಾರ್ಜುನ, 'ಓ ಪರಿ ಹಾಡು ಸೂಪರ್ ಹಿಟ್ ಆಗಿದೆ. ಈ ಹಾಡು ತೆಲುಗಿನಲ್ಲೂ ಮೂಡಿಬರಬೇಕಿತ್ತು ಅಂದುಕೊಳ್ಳುತ್ತಿರುವಾಗಲೇ ಡಿಎಸ್ಪಿ ತೆಲುಗು ಹಾಡಿನೊಂದಿಗೆ ಬಂದಿದ್ದಾರೆ.
ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ನನಗೆ ಮೊದಲಿನಿಂದಲೂ ಡಿಎಸ್ಪಿ ಅವರ ಪ್ರತಿಭೆ ಕುರಿತು ವಿಶೇಷವಾದ ಕುತೂಹಲ, ಆಸಕ್ತಿ ಇದೆ. ಅವರು ಹೇಗೆ ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡುತ್ತಾರೆ, ಹೇಗೆ ಈ ರೀತಿ ಹಿಟ್ ಹಾಡುಗಳನ್ನು ಕೊಡಲು ಸಾಧ್ಯ ಎಂಬ ಪ್ರಶ್ನೆ ಇದೆ. ಹೀಗಿರುವಾಗಲೇ ಡಿಎಸ್ಪಿ ಇನ್ನೊಂದು ಅದ್ಭುತ ಹಾಡಿನೊಂದಿಗೆ ವಾಪಸ್ ಆಗಿದ್ದಾರೆ' ಎಂದರು.