ಮುಂಬೈ:ಪ್ಯಾಲೆಸ್ಟೀನ್ ಉಗ್ರರ ಗುಂಪು ಹಮಾಸ್‌ನಿಂದ ಹಠಾತ್ ದಾಳಿಗೊಳಗಾದ ಇಸ್ರೇಲ್‌ನಲ್ಲಿ ರಕ್ತದೋಕುಳಿ ಹರಿದಿದೆ. ನೂರಾರು ರಾಕೆಟ್ ಮತ್ತು ಭೀಕರ ಗುಂಡಿನ ದಾಳಿಗೆ 300ಕ್ಕೂ ಹೆಚ್ಚು ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7 ರವರೆಗೆ ನಡೆದ ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಿದ್ದ ಭಾರತದ ಬಾಲಿವುಡ್ ನಟಿ ನುಶ್ರತ್ ಭರುಚಾ ಸಂಕಷ್ಟದಲ್ಲಿ ಸಿಲುಕಿದ್ದರು. ಈ ವಿಚಾರ ತಿಳಿದು ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಇದೀಗ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ನೆರವಿನಿಂದ ನಟಿ ಸುರಕ್ಷಿತವಾಗಿದ್ದು, ವಿಮಾನದ ಮೂಲಕ ಮರಳುತ್ತಿದ್ದಾರೆ.
ನುಶ್ರತ್ ಭರುಚಾ ತಂಡದಿಂದ ಮಾಹಿತಿ: "ಕೊನೆಗೂ ನಾವು ನುಶ್ರತ್ ಭರುಚಾ ಅವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದೇವೆ. ರಾಯಭಾರಿ ಕಚೇರಿಯ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುತ್ತಿದೆ. ನಮಗೆ ಡೈರೆಕ್ಟ್ ಫ್ಲೈಟ್ ಸಿಗಲಿಲ್ಲ, ಹಾಗಾಗಿ ಕನೆಕ್ಟಿಂಗ್ ಫ್ಲೈಟ್ ಮೂಲಕ ಹಿಂತಿರುಗುತ್ತಿದ್ದೇವೆ. ನಟಿಯ ಸಂಪೂರ್ಣ ಸುರಕ್ಷತೆಯ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರು ಭಾರತಕ್ಕೆ ಮರಳಿದ ತಕ್ಷಣ ಮಾಹಿತಿ ನೀಡುತ್ತೇವೆ. ನಾವೀಗ ನಿಟ್ಟುಸಿರು ಬಿಟ್ಟಿದ್ದೇವೆ. ದೇವರಿಗೆ ಧನ್ಯವಾದ ತಿಳಿಸುತ್ತೇವೆ'' ಎಂದು ನುಶ್ರತ್ ಭರುಚಾ ಪ್ರಚಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
38ರ ಹರೆಯದ ನಟಿ ನುಶ್ರತ್ ಭರುಚಾ 'ಪ್ಯಾರ್ ಕಾ ಪಂಚನಾಮ' ಸೀರಿಸ್, 'ಸೋನು ಕೆ ಟಿಟು ಕಿ ಸ್ವೀಟಿ' ಮತ್ತು 'ಛೋರಿ'ಯಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದವರು. ಕೊನೆಯದಾಗಿ ಥ್ರಿಲ್ಲರ್ ಡ್ರಾಮಾ 'ಅಕೆಲ್ಲಿ'ಯಲ್ಲಿ (Akelli) ಕಾಣಿಸಿಕೊಂಡಿದ್ದರು. ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಸಕ್ರಿಯರು. ಆಗಾಗ್ಗೆ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಸನಿಹವಾಗುತ್ತಾರೆ.