ಬೆಂಗಳೂರು : 'Me Too' ಎನ್ನುವ ಪದ ದೇಶವನ್ನೇ ಒಮ್ಮೆ ಬೆಚ್ಚಿ ಬೀಳಿಸಿತ್ತು. ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಟಾಪ್ ಹೀರೋಯಿನ್ಗಳು ನಮಗೂ 'ಮೀ ಟೂ' ಅನುಭವವಾಗಿದೆ, ನಾವೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ದೂರಿಕೊಂಡು ಜನತೆಯ ಹುಬ್ಬೇರಿಸಿದ್ದರು. ಈ ಮುಖೇನ ಸಿನಿ ರಂಗದೊಳಗಿನ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅಂತೆಯೇ, ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟ ಅರ್ಜುನ್ ಸರ್ಜಾ ಅವರ ಮೇಲೂ ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಮೀ ಟೂ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ 4ರಿಂದ 5 ವರ್ಷವಾದರೂ ತನಿಖೆ ಪೂರ್ಣಗೊಂಡಿಲ್ಲ.
ಇದೀಗ ಶೃತಿ ಹರಿಹರನ್ ಆರೋಪಿಸಿದ್ದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 2018ರಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಶೃತಿ ಹರಿಹರನ್ ನೀಡಿದ್ದ ದೂರು ಸಂಬಂಧ ತನಿಖೆ ವೇಳೆ ಸಾಕ್ಷಿಗಳಿಲ್ಲದೇ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರು ನೀಡಿದ್ದ ಬಿ ರಿಪೋರ್ಟ್ ಅನ್ನು ನಟಿ ಪ್ರಶ್ನಿಸಿದ್ದರು.
ಈ ಸಂಬಂಧ ಇದೀಗ ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ಕೋರ್ಟ್ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಿದ್ದು, ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಸೂಚಿಸಿದೆ. ಅರ್ಜುನ್ ಸರ್ಜಾ ವಿರುದ್ಧದ ನಟಿಯ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲಎಂದು ಈ ಹಿಂದೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಕೋರ್ಟ್ ಮುಂದಿನ ವಾರ ವಿಚಾರಣೆ ನಡೆಸಲಿದೆ.