ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಗಲಾಟೆ ನಡೆದು ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಜನಪ್ರಿಯ ನಟ ದರ್ಶನ್ ಅವರಿಗೆ ಆರ್.ಆರ್ ನಗರ ಠಾಣಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಶುಕ್ರವಾರ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ಹೇಮಂತ್ ಎಂಬಾತನ ವಿಚಾರಣೆ ನಡೆಸಿರುವ ಪೊಲೀಸರು, ಇದೀಗ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಏನಿದು ಪ್ರಕರಣ? ಅಕ್ಟೋಬರ್ 28ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ದೂರುದಾರೆ ಅಮಿತಾ ಜಿಂದಾಲ್ ಅವರು ನಟ ದರ್ಶನ್ ಮನೆ ಮುಂಭಾಗದಲ್ಲಿನ ರಸ್ತೆಯ ಖಾಲಿ ಜಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ ಅಕ್ಕಪಕ್ಕದಲ್ಲಿದ್ದ ಮೂರು ನಾಯಿಗಳನ್ನು ಕಂಡ ಅಮಿತಾ 'ತಾವು ಕಾರ್ ಬಳಿ ಹೋಗಬೇಕು, ನಾಯಿಗಳನ್ನ ಕರೆದುಕೊಂಡು ಹೋಗಿ' ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್ ಅವರ ಮನೆಯ ಕೆಲಸಗಾರ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಇದೆ.
'ಕೆಲಸಗಾರ ನಾಯಿಗಳನ್ನು ನಿಯಂತ್ರಿಸಲಿಲ್ಲ':ಇಬ್ಬರ ನಡುವಿನ ವಾಗ್ವಾದದ ವೇಳೆ ನಾಯಿಯೊಂದು ಅಮಿತಾ ಅವರ ಮೇಲೆರಗಿದೆ. ನೆಲಕ್ಕೆ ಬಿದ್ದ ಅವರ ಮೇಲೆ ಮತ್ತೊಂದು ನಾಯಿ ಸಹ ದಾಳಿ ಮಾಡಿದೆ. ಹೊಟ್ಟೆಯ ಭಾಗಕ್ಕೆ ಕಚ್ಚಿದೆ ಎಂದು ಆರೋಪಿಸಿ ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದರು. ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ಅವುಗಳನ್ನು ನಿಯಂತ್ರಿಸದೇ ಕೆಲಸಗಾರ ಸುಮ್ಮನಿದ್ದ ಎಂದು ಅಮಿತಾ ಜಿಂದಾಲ್ ಆರೋಪಿಸಿದ್ದರು.