ದೆಹಲಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಬೆಂಬಲಿಸಿ ಕಮಲ ಹಾಸನ್ ಟ್ವೀಟ್ ಮಾಡಿದ್ದು, ಈಗ ಚಿತ್ರರಂಗದ ಮೀ ಟೂ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಕಮಲ ಹಾಸನ್ ಟ್ವೀಟ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಮೀ ಟೂ ವಿಚಾರವನ್ನು ಪ್ರಸ್ತಾಪಿಸಿ ಪ್ರತಿಕ್ರಿಯಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ಇತರರು ಮಹಿಳಾ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೇಲೆ ಎಫ್ಐಆರ್ ದಾಖಲಾದರೂ ಬಂಧಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂಧನ ಮಾಡುವ ವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಕಮಲ ಹಾಸನ್ ಟ್ವಿಟರ್ನಲ್ಲಿ "ಕುಸ್ತಿಪಟಗಳ ಪ್ರತಿಭಟನೆಗೆ 1 ತಿಂಗಳಾಗಿದೆ. ರಾಷ್ಟ್ರೀಯ ಕೀರ್ತಿಗಾಗಿ ಹೋರಾಡುವ ಬದಲು ವೈಯಕ್ತಿಕ ಸುರಕ್ಷತೆಗಾಗಿ ಹೋರಾಡುತ್ತಿದ್ದಾರೆ. ಭಾರತೀಯರೇ ನಾವೆಲ್ಲರೂ ಇವರ ಕಡೆ ಗಮನ ಹರಿಸಬೇಕಿದೆ. ನಮ್ಮ ರಾಷ್ಟ್ರೀಯ ಕ್ರೀಡಾ ಐಕಾನ್‌ಗಳು ಮತ್ತು ರಾಜಕಾರಣಿಗಳಲ್ಲಿ ಯಾರು ಹೆಚ್ಚಿನ ಅಪರಾಧ ಇತಿಹಾಸ ಹೊಂದಿರುವವರು?" ಎಂದು ಪ್ರಶ್ನಿಸಿ, #IStandWithMyChampions #WrestlersProtest ಎಂದು ಹ್ಯಾಷ್ ಟ್ಯಾಗ್ಬಳಸಿದ್ದಾರೆ.
ಈ ಟ್ವೀಟ್ ರೀಟ್ವಿಟ್ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ, ತಮಿಳುನಾಡಿನಲ್ಲಿ ಒಬ್ಬ ಗಾಯಕಿಯನ್ನು 5 ವರ್ಷಗಳ ಕಾಲ ತಮ್ಮ ಕಣ್ಣಮುಂದೆಯೇ ಕಿರುಕುಳ ಆರೋಪ ಮಾಡಿದ್ದಕ್ಕಾಗಿ ನಿಷೇಧಿಸಲಾಗಿದೆ. ಕವಿಗೆ ಗೌರವ ಇರುವುದರಿಂದ ಅದರ ಬಗ್ಗೆ ಒಂದು ಮಾತನ್ನು ಆಡದೇ ಸುಮ್ಮನಿದ್ದಿರಿ. ತಮ್ಮ ಮೂಗಿನ ನೇರಕ್ಕೆ ಕಿರುಕುಳವನ್ನು ನಿರ್ಲಕ್ಷಿಸಿ ಮಹಿಳೆಯರ ಸುರಕ್ಷತೆಗಾಗಿ ಮಾತನಾಡುವ ರಾಜಕಾರಣಿಗಳನ್ನು ಹೇಗೆ ನಂಬುವುದು? Just. Asking." ಎಂದು ಬರೆದಿದ್ದಾರೆ.