ಬಹು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ವಂಚಕ ಸುಕೇಶ್ ಚಂದ್ರಶೇಖರ್ನಿಂದ ಇಬ್ಬರು ನಟಿಮಣಿಯರ ನಡುವೆ ಕಲಹ ಉಂಟಾಗಿದೆ. ದುರುದ್ದೇಶ ಕಾರಣಗಳಿಗಾಗಿ, ತಮ್ಮ ವೃತ್ತಿಜೀವನವನ್ನು ನಾಶಪಡಿಸುವ ಸಲುವಾಗಿ ತಮ್ಮ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆಂದು ಆರೋಪಿಸಿ ಬಾಲಿವುಡ್ ನಟಿ, ನೃತ್ಯಗಾರ್ತಿ ನೋರಾ ಫತೇಹಿ ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇಂದು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ನಟಿ ನೋರಾ ಫತೇಹಿ ಅವರ ಅರ್ಜಿಯನ್ನು ಮೇ 22ಕ್ಕೆ ಮುಂದೂಡಿದೆ.
ಈ ಪ್ರಕರಣ ಸಂಬಂಧ ವಿಷಯಗಳ ಪಟ್ಟಿಯನ್ನು ಪಟಿಯಾಲ ಹೌಸ್ ಕೋರ್ಟ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಂಎಂ) ಕಪಿಲ್ ಗುಪ್ತಾ ಅವರ ಮುಂದೆ ಸಲ್ಲಿಸಲಾಗಿದೆ. ಜನವರಿ 13ರಂದು ನೋರಾ ಫತೇಹಿ ಅವರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಕೃತಿ ಮಹೇಂದ್ರು ಅವರ ಸಮ್ಮುಖದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಮ್ಮ ಹೇಳಿಕೆ ನೀಡಿದ್ದರು.
ಸುಕೇಶ್ ಚಂದ್ರಶೇಖರ್ನ ಬಹು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ, ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ತನಿಖೆ ನಡೆಸುತ್ತಿದೆ. ಇದಕ್ಕೂ ಮುನ್ನ ನೋರಾ ಫತೇಹಿ ಕೂಡ ಇಒಡಬ್ಲ್ಯೂ ಮುಂದೆ ಹಾಜರಾಗಿದ್ದರು. ಆ ವೇಳೆ ಫರ್ನಾಂಡೀಸ್ ಅವರು ತನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
"ನಾವಿಬ್ಬರು ಒಂದೇ ಇಂಡಸ್ಟ್ರಿಯಲ್ಲಿದ್ದೇವೆ ಎಂದು ಜಾಕ್ವೆಲಿನ್ ಫರ್ನಾಂಡಿಸ್ ಅನಗತ್ಯವಾಗಿ ನನ್ನನ್ನು ಈ ಪ್ರಕರಣಕ್ಕೆ ಎಳೆದು ಮಾನಹಾನಿ ಮಾಡಿದ್ದಾರೆ. ಯಾವುದೇ ಕಲಾವಿದರ ವ್ಯವಹಾರ ಮತ್ತು ಅವರ ವೃತ್ತಿಜೀವನವು ಅವರ ಖ್ಯಾತಿಯನ್ನು ಆಧರಿಸಿದೆ ಎಬುದನ್ನು ಅವರು ತಿಳಿದಿದ್ದಾರೆ. ಅದಾಗ್ಯೂ, ಈ ಆರೋಪವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಅಂತಹ ದೋಷಾರೋಪಣೆಯು ದೂರುದಾರರ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂಬ ಅರಿವು ಬೇಕು'' ಎಂದು ನೋರಾ ಫತೇಹಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅದೇ ಮನವಿಯಲ್ಲಿ, ತಮ್ಮ ಖ್ಯಾತಿಯನ್ನು ತಗ್ಗಿಸಿರುವುದಾಗಿ ಕೆಲ ಮಾಧ್ಯಮ ಸಂಸ್ಥೆಗಳ ವಿರುದ್ಧ ಅವರು ಆರೋಪಿಸಿದ್ದಾರೆ.