ಶುಕ್ರವಾರ ಬಂತಂದ್ರೆ ಸಾಕು ವಾರಕ್ಕೆ ಕಡಿಮೆ ಅಂದರೂ 10 ರಿಂದ 12 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಈ ಮೂಲಕ ಸಿನಿಮಾ ರಿಲೀಸ್ ವಿಚಾರದಲ್ಲಿಯೂ ಸ್ಯಾಂಡಲ್‌ವುಡ್ ದಾಖಲೆ ಬರೆದಿದೆ. ಆದರೆ ಕರ್ನಾಟಕ ರಾಜ್ಯ ಸದ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿದೆ. ಮೇ 10 ರಂದು ಮತದಾನ ನಡೆಯಲಿದೆ. ಮತದಾನದ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಘಟಾನುಘಟಿ ನಾಯಕರು ಅಬ್ಬರದ ಮತ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗ ಮಂಕಾಗಿದೆ.
ಹೌದು, ಈ ವಾರ ಚಲನಚಿತ್ರ ನಿರ್ಮಾಪಕರು ಯಾವುದೇ ಸಿನಿಮಾಗಳನ್ನು ಬಿಡುಗಡೆ ಮಾಡುವ ಮನಸ್ಸು ಮಾಡಿಲ್ಲ. ಎಲ್ಲೆಡೆ, ಎಲ್ಲರೂ ಚುನಾವಣೆ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಮೇ 8ರ ತನಕ ಚುನಾವಣಾ ಪ್ರಚಾರದ ಅಬ್ಬರ ಇರುತ್ತದೆ. ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯ ಸಿನಿಮಾ ಸೆಲೆಬ್ರಿಟಿಗಳು ಕೂಡಾ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ಸಿನಿಮಾ ನಟರನ್ನು ಮುಖಾಮುಖಿಯಾಗಿ ನೋಡುವುದರಲ್ಲಿ ಇರುವ ಉತ್ಸಾಹ ಅವರ ಚಿತ್ರಗಳನ್ನು ನೋಡುವುದರಲ್ಲಿ ಇಲ್ಲ.
ಇದರ ಜೊತೆಗೆ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು ಬಂದರೂ ಇತ್ತೀಚಿನ ದಿನಗಳಲ್ಲಿ ಸಿನಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ನೋಡುವ ಆಸಕ್ತಿ ತೋರಿಸುತ್ತಿಲ್ಲ. ಪ್ರಸ್ತುತ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ ಅನ್ನೋದು ಚಿತ್ರಮಂದಿರದವರ ಮಾತು. ಐಪಿಎಲ್ ಕ್ರಿಕೆಟ್ ಜೋಶ್ ಮತ್ತು ಕೆಲವೆಡೆ ಮಳೆ ಇರುವುದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ ಅನ್ನೋದು ಕೆಲ ನಿರ್ಮಾಪಕರ ಮಾತು.
ಚೇತನ್ ಚಂದ್ರ ಅಭಿನಯದ 'ಪ್ರಭುತ್ವ' ಸಿನಿಮಾ ಈ ವಾರ ಬಿಡುಗಡೆ ಆಗಬೇಕಿತ್ತು. ಆದರೆ ಎಲೆಕ್ಷನ್ ಪ್ರಚಾರದ ನಡುವೆ 'ಪ್ರಭುತ್ವ' ಚಿತ್ರತಂಡ ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ. ಎಲೆಕ್ಷನ್ ಕನ್ನಡ ಸಿನಿಮಾಗಳಿಗೆ ದೊಡ್ಡ ಏಟು ಕೊಟ್ಟಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಪ್ರಚಾರದ ಸಲುವಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮತ್ತೆ ಪ್ರಚಾರ ಕೈಗೊಳ್ಳಲಿದ್ದಾರೆ. ನಾಳೆ ಬೆಂಗಳೂರಿನಲ್ಲಿ ರೋಡ್ ಶೋ ಇದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಲಿದ್ದು, ಸಿನಿಮಾ ನೋಡಬೇಕು ಅಂದುಕೊಂಡು ಪ್ಲಾನ್ ಮಾಡಿಕೊಂಡಿರುವವರು ಸಹ ಈ ಯೋಚನೆ ಕೈ ಬಿಡುವ ಸಾಧ್ಯತೆಗಳಿವೆ.