ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕಂಗನಾ ರಣಾವತ್ ಕೆಲ ಬಾಲಿವುಡ್ ಸೆಲೆಬ್ರಿಟಿಗಳನ್ನು ಗುರಿಯಾಗಿಸಿ ಟೀಕೆ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ ನಟರ ಹೆಸರನ್ನು ಉಲ್ಲೇಖಿಸಿ ಮಾತನಾಡಿದರೆ, ಹಲವು ಬಾರಿ ಯಾವುದೇ ಹೆಸರನ್ನು ತೆಗೆದುಕೊಳ್ಳದೇ ಪರೋಕ್ಷವಾಗಿ ಟೀಕಿಸುತ್ತಾರೆ.
ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ, ಮಹಾಕಾವ್ಯ ರಾಮಾಯಣದ ಕುರಿತು ತಯಾರಾಗುತ್ತಿರುವ ಮತ್ತೊಂದು ಚಿತ್ರದಲ್ಲಿ ಭಗವಾನ್ ರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಕಂಗನಾ ಬರೆದುಕೊಂಡಿದ್ದಾರೆ. ಹೆಸರನ್ನು ಉಲ್ಲೇಖಿಸಿಲ್ಲವಾದರೂ ಇದು ಬ್ರಹ್ಮಾಸ್ತ್ರ ನಟ ರಣ್ಬೀರ್ ಕಪೂರ್ ಅವರಿಗೆ ಕೊಟ್ಟಿರುವ ಟಾಂಗ್ ಎಂದು ಸ್ಪಷ್ಟವಾಗಿದೆ.
ನಿತೇಶ್ ತಿವಾರಿಯವರ ಮುಂದಿನ ಈ ಬಹು ನಿರೀಕ್ಷಿತ ಚಿತ್ರದಲ್ಲಿ ರಣ್ಬೀರ್ ಕಪೂರ್ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ರಾಮ-ಸೀತೆ ಪಾತ್ರದಲ್ಲಿ, ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಮಧು ಮಾಂಟೇನಾ ಅವರು ಬಂಡವಾಳ ಹೂಡಲಿರುವ ಈ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಯಶ್ ಅವರ ಜೊತೆ ಮಾತುಕತೆ ನಡೆಯುತ್ತಿದೆ. ರಣ್ಬೀರ್ ಈ ಚಿತ್ರಕ್ಕಾಗಿ ಲುಕ್ ಟೆಸ್ಟ್ ಅನ್ನು ಸಹ ನೀಡಿದ್ದಾರೆ ಎಂಬ ಮಾಹಿತಿ ಇದೆ. ಆದ್ರೆ ಅಧಿಕೃತವಾಗಿ ಏನನ್ನೂ ಘೋಷಿಸದಿದ್ದರೂ, ಕಂಗನಾ ಅವರು ರಣ್ಬೀರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಂಗನಾ ಇನ್ಸ್ಟಾಗ್ರಾಮ್ ಸ್ಟೋರಿ: "ನಾನು ಮತ್ತೊಂದು ರಾಮಾಯಣ ಕಥೆಯಾಧಾರಿದ ಬಾಲಿವುಡ್ ಸಿನಿಮಾ ಬಗ್ಗೆ ಕೇಳುತ್ತಿದ್ದೇನೆ. ಸಿನಿಮಾ ಇಂಡಸ್ಟ್ರಿಯವರ ವಿಚಾರದಲ್ಲಿ ಕುಖ್ಯಾತರಾಗಿರುವ, ಸ್ವಲ್ಪ ಸನ್ ಟ್ಯಾನ್ ಮತ್ತು ಆತ್ಮಸಾಕ್ಷಿಯ ಅಗತ್ಯವಿರುವ ತೆಳ್ಳಗಿನ ಬಿಳಿ ಇಲಿ ಈ ಚಿತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಸ್ತ್ರೀವಿಷಯ ಮತ್ತು ಮಾದಕ ವ್ಯಸನಕ್ಕೆ ಹೆಸರುವಾಸಿಯಾದ ಅವರು ಸಿನಿಮಾವೊಂದರಲ್ಲಿ (ಯಾರೂ ನೋಡದ ಸಿನಿಮಾ) ತನ್ನನ್ನು ತಾನು ಭಗವಾನ್ ಶಿವ ಎಂದು ಸಾಬೀತುಪಡಿಸಲು ತೀವ್ರವಾಗಿ ಪ್ರಯತ್ನಿಸಿದ ನಂತರ ಈಗ ಭಗವಾನ್ ರಾಮನಾಗಲು ಹೊರಟಿದ್ದಾರೆ. ಸ್ವಯಂ ನಿರ್ಮಿತ ಪ್ರತಿಭಾವಂತ ನಟ ಎಂದು ಕರೆಯಲ್ಪಡುವ ಒಬ್ಬ ದಕ್ಷಿಣದ ಸೂಪರ್ಸ್ಟಾರ್, ಒಬ್ಬ ನಿಷ್ಠಾವಂತ ಕುಟುಂಬದ ವ್ಯಕ್ತಿ, ಸಂಪ್ರದಾಯವಾದಿ, ವಾಲ್ಮೀಕಿ ಜಿ ವಿವರಣೆಯ ಪ್ರಕಾರ, ಮೈಬಣ್ಣ, ನಡವಳಿಕೆ ಮತ್ತು ಮುಖದ ವೈಶಿಷ್ಟ್ಯಗಳಲ್ಲಿ ಶ್ರೀರಾಮನಂತೆ ಕಾಣುವ ಆ ನಟನಿಗೆ ರಾವಣನ ಪಾತ್ರವನ್ನು ನೀಡಲು ಮುಂದಾಗುತ್ತಿದ್ದಾರೆ. ಇದು ಯಾವ ರೀತಿಯ ಕಲಿಯುಗ?. ಯಾವುದೇ ಕಾರಣಕ್ಕೂ ತೆಳುವಾಗಿ ಕಾಣುವ ಡ್ರಗ್ಗಿ ಹುಡುಗನು ಲಾರ್ಡ್ ರಾಮನ ಪಾತ್ರವನ್ನು ವಹಿಸಬಾರದು" ಎಂದು ನಟಿ ಕಂಗನಾ ರಣಾವತ್ ತಮ್ಮ ಸುದೀರ್ಘ ಬರಹದಲ್ಲಿ ಬರೆದುಕೊಂಡಿದ್ದಾರೆ.