ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ 'ಎಡಗೈಯೇ ಅಪಘಾತಕ್ಕೆ ಕಾರಣ'. ದೂದ್ ಪೇಡಾ ದಿಗಂತ್ ಮುಖ್ಯ ಭೂಮಿಕೆಯಲ್ಲಿರೋ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ವಿಭಿನ್ನ ಕಾನ್ಸೆಪ್ಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಆಗಸ್ಟ್ 13ರಂದು 'ವಿಶ್ವ ಎಡಗೈ ದಿನ'ದ ಅಂಗವಾಗಿ ಎಗಡೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ಹೊಸ ಬಗೆಯ ಹೆಲ್ಮೆಟ್ ಕೂಡ ಲಾಂಚ್ ಮಾಡಲಾಗಿದೆ. ಹೀಗೆ ವಿನೂತನ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ತಂಡಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ, 'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ. ಮೊದಲ ಬಾರಿಗೆ ನಿರೂಪ್ ಹಾಗೂ ದಿಗಂತ್ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಟಾರ್ ಕಲಾವಿದರು ಒಟ್ಟಿಗೆ ಸಿನಿಮಾ ಮಾಡುವುದು ತೀರಾ ಅಪರೂಪವಾಗಿದೆ. ಖ್ಯಾತ ಕಲಾವಿದರನ್ನು ಸೇರಿಸಿ ಸಿನಿಮಾ ಮಾಡುವುದು ನಿರ್ಮಾಪಕರಿಗೂ ಸಹ ದೊಡ್ಡ ಸವಾಲಾಗಿದೆ. ಹೀಗಿರುವಾಗ ದಿಗಂತ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಅಷ್ಟಕ್ಕೂ ಹೀರೋ ಆಗಿ ಅಬ್ಬರಿಸುತ್ತಿದ್ದ ನಿರೂಪ್ ಭಂಡಾರಿ, ದಿಗಂತ್ ನಟನೆಯ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಲು ಕಾರಣ ಸಿನಿಮಾದ ಕಾನ್ಸೆಪ್ಟ್.
ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಇಂಥ ವಿಭಿನ್ನ ರೀತಿಯ ಕಾನ್ಸೆಪ್ಟ್ ಇರುವ ಚಿತ್ರದ ಕಥೆ ಕೇಳಿ ನಿರೂಪ್ ಇಂಪ್ರೆಸ್ ಆಗಿದ್ದಾರೆ. ಯಂಗ್ ಅಂಡ್ ಎನರ್ಜಿಟಿಕ್ ತಂಡ ನೋಡಿ ಈ ಸಿನಿಮಾದಲ್ಲಿ ತಾವು ಕೂಡ ಭಾಗಿ ಆದರೆ ಚೆನ್ನಾಗಿರುತ್ತದೆ ಎಂದು ಭಾವಿಸಿ ಈ ತಂಡ ಸೇರಿದ್ದಾರೆ.