ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಮತ್ತು ಚೈತನ್ಯ (Chaitanya) ಬೇರ್ಪಡಲಿದ್ದಾರೆ ಎಂಬ ಸುದ್ದಿ ಕೆಲ ಸಮಯದಿಂದ ಸದ್ದು ಮಾಡುತ್ತಿತ್ತು. ಇದೀಗ ನಿಹಾರಿಕಾ ಕೊನಿಡೆಲಾ ಅವರೇ ಅಂತೆಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ವೈವಾಹಿಕ ಜೀವನ ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ.
ನಟಿ ನಿಹಾರಿಕಾ ಕೊನಿಡೆಲಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಚೈತನ್ಯ ಅವರಿಂದ ಬೇರ್ಪಡುವ ವಿಚಾರವನ್ನು ಖಚಿತಪಡಿಸಿದ್ದಾರೆ. ಇಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶವುಳ್ಳ ಪೋಸ್ಟ್ ಶೇರ್ ಮಾಡಿದ್ದು, ನಾವು ಪ್ರತ್ಯೇಕ ಮಾರ್ಗದಲ್ಲಿ ಮುನ್ನಡೆಯಲಿದ್ದೇವೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನಿಹಾರಿಕಾ ಕೊನಿಡೆಲಾ ಪೋಸ್ಟ್: "ಚೈತನ್ಯ ಹಾಗೂ ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಪ್ರತ್ಯೇಕ ಮಾರ್ಗದಲ್ಲಿ ಮುನ್ನಡೆಯಲಿದ್ದು, ದಯೆ ಮತ್ತು ಸೂಕ್ಷ್ಮತೆಯನ್ನು ಬಯಸುತ್ತೇವೆ" ಎಂದು ತಿಳಿಸಿದ್ದಾರೆ. ಬೆಂಬಲಕ್ಕೆ ನಿಂತ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನಾನು ನನ್ನ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ. ಈ ಸಂದರ್ಭದಲ್ಲಿ ನಾನು ನಿಮ್ಮಿಂದ ಕೊಂಚ ಏಕಾಂತವನ್ನು ಕೇಳುತ್ತೇನೆ, ಇದರಿಂದ ನಾವು ಶಾಂತಿಯಿಂದ ಹೊಸ ಜೀವನಕ್ಕೆ ಒಗ್ಗಿಕೊಳ್ಳಬಹುದು. ನಿಮ್ಮ ಅರ್ಥ ಮಾಡಿಕೊಳ್ಳುವಿಕೆಯನ್ನು ನಾನು ಪ್ರಶಂಸಿಸುತ್ತೇನೆ" ಎಂದು ತಿಳಿಸಿದ್ದಾರೆ.
ಚೈತನ್ಯ ಇಲ್ಲದೇ ನಿಹಾರಿಕಾ ಅವರು ತಮ್ಮ ಸಹೋದರ ವರುಣ್ ತೇಜ್ ಅವರ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದ ವೇಳೆ ಈ ಜೋಡಿಯ ಡಿವೋರ್ಸ್ ವದಂತಿಗಳು ಹರಡಲು ಪ್ರಾರಂಭವಾಯ್ತು. ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಿದ್ದಾರೆ.