ಇತ್ತೀಚೆಗೆ ಸ್ಯಾಂಡಲ್ ವುಡ್ನಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಗುಣಮಟ್ಟದ, ಕಂಟೆಂಟ್ವುಳ್ಳ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುವ ಮೂಲಕ ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾ ಜರ್ನಿ. ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.
ಒಂದಷ್ಟು ಸೀರಿಯಲ್ಗಳಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಹಾಗೂ ನಿರೂಪಕನಾಗಿ ಗುರುತಿಸಿಕೊಂಡಿರುವ ಅಗ್ನಿ ನಿರ್ದೇಶಕರಾಗಿ ಜರ್ನಿ ಸಿನಿಮಾ ಮೂಲಕ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕೆ ತಾವೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜರ್ನಿ ಚಿತ್ರದ ಮೂಲಕ ದಿನಿ ಎಂಬ ಯುವ ಪ್ರತಿಭೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ದಿನಿ, ಪೃಥ್ವಿ, ಸ್ಪೂರ್ತಿ, ಚೇತನ್ ದುರ್ಗ ಕಾಣಿಸಿಕೊಳ್ಳಲಿದ್ದಾರೆ.
5 ಜನ ಸ್ನೇಹಿತರ ನಡುವೆ ನಡೆಯುವ ಕಥೆ ಇದಾಗಿದ್ದು, ಕಾಲೇಜ್ ನಂತರ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ ಎಂದು ನಿರ್ದೇಶಕ ಅಗ್ನಿ ಹೇಳಿದ್ದಾರೆ.