ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಪ್ರಿವ್ಯೂ ನಿನ್ನೆ(ಸೋಮವಾರ) ಬಿಡುಗಡೆ ಆಗಿದೆ. 2 ನಿಮಿಷಗಳ ವಿಡಿಯೋ ಕಂಡ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಡೈಲಾಗ್ಸ್, ಆ್ಯಕ್ಷನ್ ಸೀನ್ಸ್ ಪ್ರೇಕ್ಷಕರ ಗಮನ ಸೆಳೆದಿದೆ.
ಆ್ಯಕ್ಷನ್ ಸಿನಿಮಾ 'ಜವಾನ್' ಪ್ರಿವ್ಯೂ ನೋಡುಗರಿಗೆ ರೋಮಾಂಚನ ಉಂಟುಮಾಡಿದೆ. ಪಠಾಣ್ ಬಳಿಕ ಶಾರುಖ್ ಅಭಿನಯಿಸುತ್ತಿರುವ ಎರಡನೇ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಿದು. ಶಾರುಖ್ ಕಂಪ್ಲೀಟ್ ಆ್ಯಕ್ಷನ್ ಲುಕ್ ಬೀರಿದ್ದರೆ, ದೀಪಿಕಾ ಪಡುಕೋಣೆ ಸೀರೆಯುಟ್ಟು ಹೋರಾಟದ ದೃಶ್ಯದಲ್ಲಿ ಅಭಿನಯಿಸಿದ್ದಾರೆ. ನಯನತಾರಾ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದು, ಶಾರುಖ್ ಅವರನ್ನು ಬೆನ್ನಟ್ಟಿದ್ದಾರೆ. ವಿಜಯ್ ಸೇತುಪತಿ ಕೂಡ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. 2 ನಿಮಿಷದ ಈ ವಿಡಿಯೋದಲ್ಲಿ ಬಹುತಾರಾಗಣ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಶಾರುಖ್ ಅವರನ್ನು ಅನೇಕ ಅವತಾರಗಳಲ್ಲಿ ನೋಡಬಹುದು. ಆದರೆ ಈಗ ದಿಪೀಕಾ ಪಡುಕೋಣೆ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವಿಷ್ಟೇ.
'ಜವಾನ್' ಪ್ರಿವ್ಯೂ ಮೂಲಕ ಬಾಲಿವುಡ್ ಬಾದ್‌ಶಾ ಅಭಿಮಾನಿ ಬಳಗದ ಜೊತೆಗೆ ಭಾರತೀಯ ಚಿತ್ರರಂಗವನ್ನೇ ಚಕಿತಗೊಳಿಸಿದೆ. ಕಿಂಗ್ ಖಾನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಈ ಹೊತ್ತಿನಲ್ಲೇ, ಜವಾನ್ ಪ್ರಿವ್ಯೂ ಅವರ ಕುತೂಹಲವನ್ನು ಹೆಚ್ಚಿಸಿದೆ. ಶಾರುಖ್ ಹಲವು ನೋಟಗಳಲ್ಲಿ ಕಂಡುಬಂದರೆ, ದೀಪಿಕಾ ಪಡುಕೋಣೆ ಶಕ್ತಿಶಾಲಿ ಶೈಲಿ ದೃಶ್ಯದಲ್ಲಿ ಅಬ್ಬರಿಸಿದ್ದಾರೆ. ಕೆಂಪು ಸೀರೆಯುಟ್ಟು ಆ್ಯಕ್ಷನ್ ಸೀನ್ನಲ್ಲಿ ಆರ್ಭಟಿಸಿದ್ದು ಪ್ರತಿಭಾನ್ವಿತ ನಟಿಯ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ಶಾರುಖ್ ಖಾನ್ ಅವರ ತಾಯಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಇದಕ್ಕೆ ತಮ್ಮದೇ ಆದ ಪುರಾವೆ ನೀಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಪಡುಕೋಣೆ ಅವರ ಹೊಡೆದಾಟದ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಈ ಚಿತ್ರದಲ್ಲಿ ಶಾರುಖ್ ಅವರ ತಾಯಿಯ ಪಾತ್ರವನ್ನು ದೀಪಿಕಾ ನಿರ್ವಹಿಸುತ್ತಾರೆ ಎಂದು ಊಹಿಸುತ್ತಿದ್ದಾರೆ. ದೀಪಿಕಾ ಅವರ ವಿಡಿಯೋ, ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ.