'ನೀರಾ ಆರ್ಯ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದ ಪ್ರಯುಕ್ತ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕಿ ರೂಪಾ ಐಯ್ಯರ್ 'ನೀರಾ ಆರ್ಯ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಎಂ.ಇ.ಎಸ್ ಮೈದಾನದಲ್ಲಿ ವಿಶ್ವ ಹಿಂದೂ ಮಹಿಳಾ ಪ್ರತಿಷ್ಠಾನ ಆಯೋಜಿಸಿದ್ದ ನೇತಾಜಿ ಜನ್ಮದಿನ ಕಾರ್ಯಕ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಕಾರ್ಯಕ್ರಮದಲ್ಲಿ ನಟಿ ನಿರ್ದೇಶಕಿ ರೂಪಾ ಅಯ್ಯರ್, ನಟಿ ಮಾಲಾಶ್ರೀ, ಕರ್ನಾಟಕ ವಿಧಾನಸಭಾ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ನೇತಾಜಿಯವರ ಮರಿ ಮೊಮ್ಮಗಳು ರಾಜಶ್ರೀ ಚೌದರಿ ಭಾಗಿಯಾಗಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಕಟ್ಟಿರುವ ಮೊದಲ ಮಹಿಳಾ ಆರ್ಮಿಯ ಕಥೆ ಆಧಾರಿತ ಸಿನಿಮಾ ಇದಾಗಿದ್ದು 'ನೀರಾ ಆರ್ಯ' ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಸ್ವತಃ ರೂಪಾ ಅಯ್ಯರ್ ಅವರೇ ನೀರಾ ಆರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾವನ್ನು ಕೂಡ ಅವರೇ ನಿರ್ದೇಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ನೇತಾಜಿ ಮರಿ ಮೊಮ್ಮಗಳು ರಾಜಶ್ರೀ ಔದರಿ ಮಾತನಾಡಿ, "ರೂಪಾ ಅಯ್ಯರ್ ನೀರಾ ಆರ್ಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಮಾಡೋಕೆ ಧೈರ್ಯ ಬೇಕು. ರೂಪ ಅವರನ್ನು ನೋಡಿದರೆ ನೀರಾ ಆರ್ಯರನ್ನೇ ನೋಡಿದ ಹಾಗಾಗುತ್ತದೆ. ರೂಪಾ ಅವರಲ್ಲಿ ನೀರಾ ಆರ್ಯಗಿದ್ದ ಪವರ್ ಇದೆ" ಎಂದರು.
'ಒಳಗೆ ಗುಂಡು ಸೇರದಿದ್ದರೂ ಹುಡುಗಿ ಗಂಡು ಆಗಬೇಕು...': "ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳನ್ನು ಭೇಟಿ ಮಾಡಿ ತುಂಬಾನೇ ಸಂತೋಷವಾಗುತ್ತಿದೆ. ನೀರಾ ಅರ್ಯ ಸಿನಿಮಾ ಟೀಸರ್ ತುಂಬಾ ಚೆನ್ನಾಗಿದೆ. ದೇಶಕ್ಕಾಗಿ ನೀರಾ ಆರ್ಯ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ಗೊತ್ತಿದೆ. ಒಂದು ಹೆಣ್ಣು ಕಾಳಿ ಅವತಾರೆ ಎತ್ತಿದ್ರೆ ಶಿವನನ್ನೂ ಎದುರಿಸಬಹುದು. ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಅಲ್ಲ. ಒಳಗೆ ಸೇರದೇ ಇದ್ರೂ ಹುಡುಗಿ ಗಂಡು ಆಗಬೇಕು. ಎಲ್ಲರೂ ನ್ಯಾಯಕ್ಕೋಸ್ಕರ ಹೋರಾಡಬೇಕು. ಪ್ರತಿಯೊಬ್ಬರು ಜೀವನದಲ್ಲಿ ಧೈರ್ಯ ಎದುರಿಸಬೇಕು. ನೀರಾ ಆರ್ಯ ಸಿನಿಮಾವನ್ನು ರೂಪಾ ಅಯ್ಯರ್ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಇದು ಸುಭಾಷ್ ಚಂದ್ರ ಬೋಸ್ ಅವರ ಮಹಿಳಾ ಆರ್ಮಿಯ ಕಥೆಯಾಗಿದೆ. ಇಂತಹ ಸಿನಿಮಾ ಮಾಡಲು ನಿಜಕ್ಕೂ ಧೈರ್ಯ ಬೇಕು" ಎಂದು ನಟಿ ಮಾಲಾಶ್ರೀ ಹೇಳಿದರು.
ಇದನ್ನೂ ಓದಿ:5 ವರ್ಷಗಳ ನಂತರ 'ರಾಧಾಕೃಷ್ಣ' ಧಾರಾವಾಹಿ ಮುಕ್ತಾಯ: ಅನುಭವ ಹಂಚಿಕೊಂಡ ಸುಮೇಧ್, ಮಲ್ಲಿಕಾ
ಬಳಿಕ ಮಾತನಾಡಿದ ನಟಿ, ನಿರ್ದೇಶಕಿ ರೂಪಾ ಅಯ್ಯರ್, "ಸುಭಾಷ್ ಚಂದ್ರ ಬೋಸ್ ಅವರ ಒಂದು ಭಾಷಣಕ್ಕೆ ಅಲ್ಲಿದ್ದ ಜನರು ಪ್ರಚೋದನೆ ಆಗುತ್ತಿದ್ದರು. ನೇಜಾಜಿ ಅವರ ವ್ಯಕ್ತಿತ್ವ ಬಹಳ ದೊಡ್ಡದು. ದೇಶದಲ್ಲಿ ಮೊದಲ ಮಹಿಳಾ ಆರ್ಮಿಯನ್ನು ಕಟ್ಟಿದ ಕೀರ್ತಿ ನೇತಾಜಿಯವರಿಗೆ ಸಲ್ಲುತ್ತದೆ. ದೇಶಕ್ಕಾಗಿ ಹೋರಾಡುತ್ತಿದ್ದ ಸುಭಾಷ್ ಚಂದ್ರ ಬೋಸ್‌ರನ್ನು ಉಳಿಸಿಕೊಳ್ಳಲು ತನ್ನ ಗಂಡನನ್ನೇ ಕೊಂದ ಮಹಿಳೆ ನೀರಾ ಆರ್ಯ. ಆದರೆ ಸರ್ಕಾರ ನೀರಾ ಆರ್ಯಗೆ ಯಾವುದೇ ಗೌರವ, ಮನ್ನಣೆ ಕೊಟ್ಟಿಲ್ಲ. ಅಲ್ಲದೇ ಅವರ ಆತ್ಮಕಥೆಯನ್ನು ಹೊರ ತರಲು ಬಿಡಲಿಲ್ಲ. ಹೀಗಾಗಿಯೇ ಈ ಕಥೆಯನ್ನು ನಾವು ಸಿನಿಮಾವನ್ನಾಗಿ ಮಾಡುತ್ತಿದ್ದೇವೆ" ಎಂದರು.
ಇನ್ನೂ ನೀರಾ ಆರ್ಯ ಅವರ ಹೋರಾಟದ ಕಥೆಯನ್ನು ರೂಪಾ ಅಯ್ಯರ್ ದೃಶ್ಯ ರೂಪಕ್ಕೆ ಇಳಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಫಸ್ಟ್ ಲುಕ್ ಪೋಸ್ಟರ್ ಅಂತೂ ನೀರಾ ಆರ್ಯ ಅವರನ್ನು ನೆನಪಿಸುವಂತಿದೆ. ಚಿತ್ರದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಅಲ್ಲದೇ ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ನಟಿಸುವ ಸಾಧ್ಯತೆಯಿದೆ. ರೂಪಾ ಅಯ್ಯರ್ ಪತಿ ಗೌತಮ್ ಶ್ರೀವತ್ಸ ಸಂಗೀತ ಮತ್ತು ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದ್ದು, ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲ.
'ನೀರಾ ಆರ್ಯ ಯಾರು.?':ಬ್ರಿಟಿಷ್ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದ ಪತಿ ಶ್ರೀಕಾಂತ್ ಜೈಶಂಕರ್ ದಾಸ್ನ್ನು ಕೊಂದು ದೇಶ ಪ್ರೇಮ ಮೆರೆದ ಸಾಧಕಿ ನೀರಾ ಆರ್ಯ. ಉತ್ತರ ಪ್ರದೇಶದ ಭಾಘಪತ್ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನೀರಾ, ಜೈಶಂಕರ್ ದಾಸ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ನಂತರದಲ್ಲಿ ನೇತಾಜಿಯವರ ಸ್ವಾತಂತ್ರ್ಯ ಹೋರಾಟದಿಂದ ಸ್ಪೂರ್ತಿಗೊಂಡು ಅವರ ತಂಡ ಸೇರಿದರು. ಬಳಿಕ ಐಎನ್ಎಯ ಝಾನ್ಸಿ ರಾಣಿ ರೆಜಿಮೆಂಟ್‌ನ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಸಂದರ್ಭದಲ್ಲಿ ಬ್ರಿಟಿಷರು ನೇತಾಜಿ ಅವರನ್ನು ಮಟ್ಟಹಾಕಲು ಹವಣಿಸುತ್ತಿದ್ದರು. ಅದಕ್ಕಾಗಿಯೇ ಬ್ರಿಟಿಷರು ಸುಭಾಷ್ ಚಂದ್ರ ಬೋಸ್ ಅವರನ್ನು ಪತ್ತೆ ಹಚ್ಚುವುದು ಮತ್ತು ಸಾಧ್ಯವಾದರೆ ಕೊಲ್ಲುವ ಜವಾಬ್ದಾರಿಯನ್ನು ನೀರಾ ಪತಿ ಜೈಶಂಕರ್ ದಾಸ್‌ಗೆ ನೀಡಿದ್ದರು.
ಈ ಹಿನ್ನೆಲೆ ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾಹಿತಿ ನೀಡುವಂತೆ ಜೈ ಶಂಕರ್ ಪದೇ ಪದೇ ಪತ್ನಿ ನೀರಾ ಆರ್ಯ ಅವರನ್ನು ಪೀಡಿಸುತ್ತಿದ್ದ. ಆದರೆ ನೀರಾ ಮಾತ್ರ ಯಾವುದೇ ವಿಷಯವನ್ನು ಆತನಲ್ಲಿ ಬಾಯಿ ಬಿಟ್ಟಿರಲಿಲ್ಲ. ಆದರೆ ಜೈ ಶಂಕರ್ ನೇತಾಜಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದ. ಜೊತೆಗೆ ಅವರನ್ನು ಹತ್ಯೆಗೈಯಲೂ ಯತ್ನಿಸಿದಾಗ ಸ್ವಲ್ಪದರಲ್ಲೇ ನೇತಾಜಿಯವರು ಪಾರಾಗಿದ್ದರು. ಬಳಿಕ ಮತ್ತೊಮ್ಮೆ ಜೈ ಶಂಕರ್ ನೇತಾಜಿಯವರ ಮೇಲೆ ಆಕ್ರಮಣ ನಡೆಸುವ ಮುನ್ನ ಸ್ವತಃ ನೀರಾ ಆರ್ಯ ಅವರೇ ಪತಿ ಜೈ ಶಂಕರ್ ಅನ್ನು ಹರಿತವಾದ ಖಡ್ಗದಿಂದಲೇ ಕೊಂದು ಹಾಕಿದರು. ಗಂಡನ ಹತ್ಯೆ ಕಾರಣಕ್ಕಾಗಿ ನೀರಾ ಆರ್ಯ ಅವರನ್ನು ಬ್ರಿಟಿಷರು ಬಂಧಿಸಿ ಅಂಡಮಾನ್ ಜೈಲಿಗಟ್ಟಿದ್ದರು. ಅಲ್ಲಿಯೂ ನೇತಾಜಿ ಬಗ್ಗೆ ಮಾಹಿತಿ ನೀಡುವಂತೆ ಸಾಕಷ್ಟು ಚಿತ್ರಹಿಂಸೆಯನ್ನು ಬ್ರಿಟಿಷರು ನೀಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ನೀರಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:ಪಠಾಣ್ ರಿಲೀಸ್ಗೆ ಇನ್ನೆರಡೇ ದಿನ ಬಾಕಿ: ಅಭಿಮಾನಿಗಳಿಗೆ ಶುಭಾಶಯ ಕೋರಿದ ಶಾರುಖ್ ಖಾನ್