ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin siddiqui) ಕೌಟುಂಬಿಕ ಕಲಹ ದಿನೇ ದಿನೆ ಹೆಚ್ಚಾಗುತ್ತಿದೆ. ಬಾಂಬೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಮಕ್ಕಳು ಇರುವ ಸ್ಥಳವನ್ನು ಬಹಿರಂಗಪಡಿಸಲು ಪತ್ನಿ ಆಲಿಯಾ ಸಿದ್ದಿಕಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಬಾಂಬೆ ಹೈಕೋರ್ಟ್ ಶುಕ್ರವಾರ ಈ ದಂಪತಿಗೆ ತಮ್ಮ ಮಕ್ಕಳ ಬಗ್ಗೆ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಸಲಹೆ ನೀಡಿದೆ.
ಏತನ್ಮಧ್ಯೆ, ಆಲಿಯಾ ಸಿದ್ದಿಕಿ ಅವರು ಪತಿ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ ಮತ್ತು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಆಲಿಯಾ, 2021ರಲ್ಲಿಯೇ ನವಾಜುದ್ದೀನ್‌ಗೆ ವಿಚ್ಛೇದನ ನೋಟಿಸ್ ನೀಡಲಾಗಿದೆ. ಆದರೂ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಗುರುವಾರ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಅತ್ಯಾಚಾರದ ದೂರು (ಪುರಾವೆಯೊಂದಿಗೆ) ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
"ಏನೇ ಆಗಲಿ, ನನ್ನ ಮುಗ್ಧ ಮಕ್ಕಳನ್ನು ಅವರ ಬಳಿ ಹೋಗಲು ನಾನು ಬಿಡುವುದಿಲ್ಲ" ಎಂದು ಆಲಿಯಾ ತಿಳಿಸಿದ್ದಾರೆ. ಈ ವಿಡಿಯೋ ಪೋಸ್ಟ್ನಲ್ಲಿ ಆಲಿಯಾ ಭಾವುಕರಾಗಿರುವುದನ್ನು ಕಾಣಬಹುದು. ಈ ದಂಪತಿ 2009ರಲ್ಲಿ ವೈವಾಹಿಕ ಜೀವನ ಆರಂಭಿಸಿದರು. ಆದರೆ, ದಂಪತಿ ಕಳೆದ ಕೆಲವು ವಾರಗಳಿಂದ ವೈಯಕ್ತಿಕ ವಿಷಯಗಳು, ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಾ ಸದ್ಯ ಸುದ್ದಿಯಲ್ಲಿದ್ದಾರೆ.
2022ರ ಜವರಿಯಲ್ಲಿ ನಟನ ಮನೆಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ನವಾಜುದ್ದೀನ್ ಅವರ ತಾಯಿ ಆಲಿಯಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೌಟುಂಬಿಕ ಹಿಂಸೆ ಆರೋಪದ ಮೇಲೆ ಅತ್ತೆ ವಿರುದ್ಧ ಆಲಿಯಾ ಕೂಡ ಪ್ರತಿದೂರು ದಾಖಲಿಸಿದ್ದರು. ಆ ಸಮಯದಲ್ಲಿ ಆಲಿಯಾ ತಮ್ಮ ಅತ್ತೆಯನ್ನು "ಹೃದಯಹೀನ" ಎಂದು ಕರೆದಿದ್ದರು.