ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಭಿನಯದ 'ಮತ್ತೆ ಮದುವೆ' ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದೇ ಮೇ. 26ರಂದು ಚಿತ್ರ ತೆರೆ ಕಾಣಲು ಸಜ್ಜಾಗಿದೆ. ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಸಿನಿಮಾ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಜೋಡಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.
'ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ': ಇದು ನಿಮ್ಮ ಜೀವನದ ರಿಯಲ್ ಲೈಫ್ ಸ್ಟೋರಿನಾ? ಟೀಸರ್ ನೋಡಿದರೆ ಇದುವರೆಗೂ ನಡೆದ ಘಟನೆಗಳನ್ನೇ ಅಲ್ಲಿ ತೋರಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟಿ ಪವಿತ್ರಾ ಲೋಕೇಶ್, ''ಒಂದೆರಡು ನಿಮಿಷದ ಟೀಸರ್, ಟ್ರೇಲರ್ ನೋಡಿ ಯಾವ ನಿರ್ಧಾರಕ್ಕೂ ಬರಬೇಡಿ. ಸಿನಿಮಾ ನೋಡಿದರೆ ನಾವು ಏನು ಹೇಳಲು ಹೊರಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಹೊರಟಿದ್ದೇವೆ. ಈಗಲೇ ಸಿನಿಮಾ ಕಥೆಯನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನಕ್ಕೂ ಸಿನಿಮಾಗೂ ಏನೂ ಸಂಬಂಧ ಇಲ್ಲ. ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ" ಎಂದು ತಿಳಿಸಿದರು.
'ನನ್ನ ಹೆಗಲ ಮೇಲಿತ್ತು ಗನ್, ನರೇಶ್ ಅವರೇ ಗುರಿ': "ನನ್ನ ವೃತ್ತಿಗೂ, ವೈಯಕ್ತಿಕ ವಿಚಾರಕ್ಕೂ ಲಿಂಕ್ ಮಾಡುವುದು ನನಗೆ ಇಷ್ಟವಿಲ್ಲ. ನನ್ನನ್ನು ಒಬ್ಬ ನಟಿಯಾಗಿ ಮಾತ್ರ ನೋಡಿ, ಬೇಕಂತಲೇ ಯಾರೂ ಸುದ್ದಿಯಾಗುವುದಿಲ್ಲ. 1994ನಲ್ಲಿ ಅಂಬರೀಶ್ ಅವರು ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲಿಂದ ಇದುವರೆಗೂ ನಾನು ಯಾವುದೇ ವಿಚಾರವನ್ನು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡಿರಲಿಲ್ಲ. ದುರುದ್ದೇಶಪೂರ್ವಕವಾಗಿ ನನ್ನ ಹೆಗಲ ಮೇಲೆ ಗನ್ ಇಟ್ಟು ನರೇಶ್ ಅವರನ್ನು ಶೂಟ್ ಮಾಡುವ ಪಿತೂರಿ ನಡೆದಿತ್ತು" ಎಂದು ಪವಿತ್ರಾ ಹೇಳಿದರು.