ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಹೈದರಾಬಾದ್:ಟಾಲಿವುಡ್ ಹಿರಿಯ ನಟ ನರೇಶ್ ಅವರು ಶುಕ್ರವಾರ ಬೆಳಗ್ಗೆ ನಟಿ ಪವಿತ್ರಾ ಲೋಕೇಶ್ ಜೊತೆ ಮದುವೆ ಆಗಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇಬ್ಬರು ಸಂಪ್ರದಾಯಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಶೇಷ ವಿಡಿಯೋ ಹಂಚಿಕೊಂಡಿರುವ ನರೇಶ್, ಅಭಿಮಾನಿಗಳ ಆಶೀರ್ವಾದ ಬಯಸಿದ್ದಾರೆ. "ನಮ್ಮ ಶಾಂತಿ ಮತ್ತು ಸಂತೋಷದ ಹೊಸ ಪ್ರಯಾಣಕ್ಕಾಗಿ ನಾನು ನಿಮ್ಮ ಆಶೀರ್ವಾದ ಕೋರುತ್ತಿದ್ದೇನೆ. ಒಂದು ಪವಿತ್ರ ಬಂಧನ... ಎರಡು ಮನಸ್ಸುಗಳು... ಮೂರು ಗಂಟು... ಏಳು ಅಡಿ... ನಿಮ್ಮ ಆಶೀರ್ವಾದ ಕೋರುತ್ತಿರುವ ಇಂತಿ ನಿಮ್ಮ ಪ್ರೀತಿಯ ಪವಿತ್ರಾ-ನರೇಶ್'' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:'ಎನ್ಬಿಕೆ 108': ಕನ್ನಡತಿ ಶ್ರೀಲೀಲಾಗೆ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಚಾನ್ಸ್
ವಿಡಿಯೋ ನೋಡಿದವರೆಲ್ಲರೂ ಅವರಿಗೆ ಶುಭಾಶಯ ಕೋರಲಾರಂಭಿಸಿದ್ದಾರೆ. ಆದರೆ, ಇವರಿಬ್ಬರು ನಿಜವಾಗಿಯೂ ಮದುವೆಯಾಗಿದ್ದಾರಾ? ಅಥವಾ ಈ ವಿಡಿಯೋ ಯಾವುದಾದರೂ ಸಿನಿಮಾಗಾಗಿ ಶೂಟ್ ಮಾಡಲಾಗಿದೆಯೇ? ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಎಂ.ಎಸ್.ರಾಜು ನಿರ್ದೇಶನದ ಚಿತ್ರದಲ್ಲಿನ ದೃಶ್ಯವಿದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ಗಳು ಕಂಡುಬರುತ್ತಿವೆ.
‘ಸಮ್ಮೋಹನಂ’ ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿದ್ದ ನರೇಶ್-ಪವಿತ್ರಾ ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈ ಹಿಂದೆ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದು ಶೀಘ್ರದಲ್ಲೇ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು. ಕಳೆದ ವರ್ಷ ಡಿಸೆಂಬರ್ 31ರಂದು ನರೇಶ್ ಹೊಸ ವರ್ಷವನ್ನು ಸ್ವಾಗತಿಸುತ್ತಾ ಶೇರ್ ಮಾಡಿದ್ದ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆ ವಿಡಿಯೋದಲ್ಲಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ ತಮ್ಮ 'ಪವಿತ್ರಲೋಕ'ಕ್ಕೆ ಬರಮಾಡಿಕೊಂಡಿದ್ದರು. ಅಲ್ಲದೇ ಹೊಸ ವರ್ಷದ ನಿಮಿತ್ತ ಅಂದು ಕೇಕ್ ಕತ್ತರಿಸಿದ್ದ ನರೇಶ್, ಪವಿತ್ರಾ ಲೋಕೇಶ್ ಅವರನ್ನು ಚುಂಬಿಸಿ ನೂತನ ವರ್ಷವನ್ನು ಬರಮಾಡಿಕೊಂಡಿದ್ದರು. ಹೊಸ ವರ್ಷ, ಹೊಸ ಆರಂಭ, ನಿಮ್ಮ ಆಶೀರ್ವಾದ ಇರಲಿ ಎಂದು ಕೋರಿಕೊಂಡಿದ್ದರು. ಇದೀಗ ಮತ್ತೆ ಅಂತಹದ್ದೇ ಶಾಕ್ ನೀಡುವ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ಹರಿದಾಡುತ್ತಿರುವ ಈ ವಿಡಿಯೋ ಕೂಡ ಸಿನಿಮಾದ ಪ್ರಚಾರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮತ್ತೆ 'ಖುಷಿ' ಮೂಡ್ನಲ್ಲಿ ಸಮಂತಾ.. ಅದ್ಧೂರಿ ಸ್ವಾಗತ ನೀಡಿದ ವಿಜಯ್ ದೇವರಕೊಂಡ
ಕಳೆದ ಹಲವು ನರೇಶ್ ಮತ್ತು ಪವಿತ್ರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿತ್ರರಂಗವು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರು ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು. ನರೇಶ್ ಅವರ ಮೂರನೇ ಪತ್ನಿ ರಮ್ಯಾ ಕೂಡ ಇವರಿಬ್ಬರ ಸಂಬಂಧದ ಬಗ್ಗೆ ಗಂಭೀರ ಆರೋಪ ಮಾಡಿದ್ದರು.
ಇತ್ತೀಚೆಗೆ ಮೈಸೂರಿನ ಹೋಟೆಲ್ವೊಂದರಲ್ಲಿ ಇಬ್ಬರೂ ಜೊತೆಯಾಗಿ ತಂಗಿರುವ ಸುದ್ದಿ ತಿಳಿದು ರಮ್ಯಾ ರಘುಪತಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನರೇಶ್ ಮತ್ತು ಪವಿತ್ರಾ ಅವರನ್ನು ಹೋಟೆಲ್ನಿಂದ ಹೊರಗೆ ಕರೆಯುವಂತೆ ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ಭದ್ರತೆಯಲ್ಲಿ ನರೇಶ್ ಮತ್ತು ಪವಿತ್ರಾ ಅವರನ್ನು ಹೊರಗೆ ಕರೆತಂದು ಕಾರಲ್ಲಿ ಕಳುಹಿಸಿದ್ದರು.